ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 235 ಸ್ಥಾನ ಗಳಿಸಿದ್ದು, ಸರ್ಕಾರ ರಚನೆ ಕುರಿತಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಇಂಡಿಯಾ ಮೈತ್ರಿಕೂಟದ ಸಭೆ ಇದೆ. ಅಲ್ಲೇ ಸರ್ಕಾರ ರಚನೆ ನಿರ್ಧಾರ ಕೈಗೊಳ್ಳುತ್ತೇವೆ. ಇಂಡಿಯಾ ಮೈತ್ರಿಕೂಟದ ನಾಯಕರ ಜೊತೆ ನಾಳೆ ಸಭೆ ನಡೆಸಿ ನಾವು ಸರ್ಕಾರ ಮಾಡುತ್ತೇವೆಯೋ ಇಲ್ಲವೋ ಎಂದು ಹೇಳುತ್ತೇವೆ ಎಂದು ತಿಳಿಸಿದ್ದಾರೆ.
ಇಂಡಿಯಾ ಒಕ್ಕೂಟದ ಸಹಪಾಠಿಗಳನ್ನು ಕೇಳದೆ ಏನೂ ಹೇಳುವುದಿಲ್ಲ. ನಾವು ಈಗಲೇ ಯಾವುದನ್ನೂ ನಿರ್ಧಾರ ಮಾಡುವುದಿಲ್ಲ. ನಾಳೆ ಇಂಡಿಯಾ ಮೈತ್ರಿಕೂಟ ಎಲ್ಲವನ್ನು ನಿರ್ಧಾರ ಮಾಡಲಿದೆ. ಸರ್ಕಾರ ರಚನೆಗೆ ಬಹಳ ಫೈನ್ ಲೈನ್ ಇದೆ. ಎಲ್ಲವನ್ನು ನಾಳೆಯ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಎಲ್ಲೆಲ್ಲಿ ಒಗ್ಗಟ್ಟಾಗಿ ಹೋರಾಟ ನಡೆಸಿದ್ದೇವೆಯೋ ಅಲ್ಲಿ ಗೆಲುವು ಸಿಕ್ಕಿದೆ. ಸಂವಿಧಾನ ಉಳಿಸುವ ಮೊದಲ ಹೆಜ್ಜೆ ಜನರು ಇಟ್ಟಿದ್ದಾರೆ. ಮೊದಲು ನಾವು ಇಂಡಿಯಾ ಒಕ್ಕೂಟದ ನಾಯಕರಿಗೆ ಗೌರವ ಸಲ್ಲಿಸುತ್ತೇವೆ. ಸರ್ಕಾರ ರಚನೆ ಬಗ್ಗೆ ಉತ್ತಮ ಅವಕಾಶ ಇದೆ. ನಾಳೆ ಇಂಡಿಯಾ ಮೈತ್ರಿಕೂಟ ನಾಯಕರೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ.