ತನ್ನೆಲ್ಲಾ ನಾಗರಿಕರಿಗೆ ಇ-ಪಾಸ್ಪೋರ್ಟ್‌ಗಳನ್ನು ವಿತರಿಸುವ ನಿಟ್ಟಿನಲ್ಲಿ ಭಾರತ ದಾಪುಗಾಲಿಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ತಿಳಿಸಿದ್ದಾರೆ.
ಮುಂದಿನ ತಲೆಮಾರಿನ ಇ-ಪಾಸ್ಪೋರ್ಟ್‌ಗಳನ್ನು ಪ್ರಜೆಗಳಿಗೆ ವಿತರಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ ಟ್ವೀಟ್ ಮಾಡಿದ್ದು, ಈ ಬಯೋಮೆಟ್ರಿಕ್ ದತ್ತಾಂಶಗಳ ಮೂಲಕ ಈ ಪಾಸ್ಪೋರ್ಟ್‌ಗಳನ್ನು ವಿತರಿಸುವ ಮೂಲಕ ಜಗತ್ತಿನಾದ್ಯಂತ ಇಮಿಗ್ರೇಷನ್ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಲು ಇದು ನೆರವಾಗುತ್ತದೆ ಎಂದು ತಿಳಿಸಿದ್ದಾರೆ.
ಒಣ ಹವೆ ನಡುವೆ ನಾಳೆ ಮಳೆ ಸಾಧ್ಯತೆ
ಬಯೋಮೆಟ್ರಿಕ್ ಗುರುತು ಹಿಡಿಯುವ ವ್ಯವಸ್ಥೆಯೊಂದಿಗೆ ಎಲೆಕ್ಟ್ರಾನಿಕ್ ಚಿಪ್ ಅನ್ನು ಸಮಗ್ರಗೊಳಿಸುವ ಇ ಪಾಸ್ಪೋರ್ಟ್ ಅನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಓ) ನಿಗದಿಪಡಿಸಿದ ಗುಣಮಟ್ಟದಲ್ಲಿ ವಿತರಿಸಲು ಭಾರತ ಮುಂದಾಗಿದೆ.
ಯಂತ್ರಗಳು ಓದಬಲ್ಲ ಪ್ರಯಾಣ ದಾಖಲಾತಿಗಳನ್ನು (ಎಂಆರ್‌ಟಿಡಿ) ಕಡ್ಡಾಯಗೊಳಿಸಿ 2016ರಲ್ಲಿ ಐಸಿಎಓ ಹೊಸ ನಿಯಮವೊಂದನ್ನು ಪರಿಚಯಿಸಿದೆ. ಈ ಮೂಲಕ ಎಲ್ಲಾ ಪಾಸ್ಪೋರ್ಟ್‌ಗಳ ಮೊದಲ ಪುಟದ ಕೊನೆಯಲ್ಲಿ ಎರಡು ಸಾಲುಗಳಿರಲಿದ್ದು, ಅವುಗಳಲ್ಲಿ ಪಾಸ್ಪೋರ್ಟ್‌ದಾರರ ವಿವರಗಳನ್ನು ತುಂಬಿರಲಾಗುತ್ತದೆ. ಸದ್ಯಕ್ಕೆ ಭಾರತೀಯರ ಪಾಸ್ಪೋರ್ಟ್‌ಗಳು ಇದೇ ವರ್ಗದಲ್ಲಿ ಬರುತ್ತವೆ.
ಸದ್ಯ ಹೊತ್ತಿಗೆಗಳ ಮೇಲೆ ಪಾಸ್ಪೋರ್ಟ್‌ಗಳನ್ನು ಮುದ್ರಿಸುವ ಭಾರತ, ಇಪಾಸ್ಪೋರ್ಟ್ ಗಳ ಮೂಲಕ ಎಲೆಕ್ಟ್ರಾನಿಕ್ ಚಿಪ್‌ಗಳಿಂದ ಇನ್ನೊಂದು ಹಂತದ ಭದ್ರತೆಯನ್ನು ಸೇರಿಸಲು ಮುಂದಾಗುತ್ತಿದೆ. ಈ ಚಿಪ್‌ನಲ್ಲಿ ಭಾರತೀಯ ಪೌರರ ಜೈವಿಕನಕ್ಷೆಯ ವಿವರಗಳಿದ್ದು, ಡಿಜಿಟಲ್ ಭದ್ರತಾ ಫೀಚರ್‌ಗಳು ಇರಲಿವೆ. ಈ ಫೀಚರ್‌ಗಳಲ್ಲಿ ’ಡಿಜಿಟಲ್ ಸಹಿ’ ಸಹ ಇರಲಿದ್ದು, ಇದು ಪ್ರತಿಯೊಂದು ದೇಶಕ್ಕೂ ವಿಶಿಷ್ಟವಾಗಿರಲಿದೆ.
ಭಾರತವು ಅದಾಗಲೇ ರಾಯಭಾರಿ ಮತ್ತು ಅಧಿಕಾರಿಗಳ ಮಟ್ಟದಲ್ಲಿ 20,000ದಷ್ಟು ಇಪಾಸ್ಪೋರ್ಟ್‌ಗಳನ್ನು ವಿತರಿಸಿದೆ. ಇವುಗಳ ಪೈಕಿ ಮೊದಲ ಪಾಸ್ಪೋರ್ಟ್ ಅನ್ನು 2008ರಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ವಿತರಿಸಲಾಗಿತ್ತು.
ಇ ಪಾಸ್ಪೋರ್ಟ್‌ನ ತಂತ್ರಾಂಶ ಅಭಿವೃದ್ಧಿಪಡಿಸುವ ಹೊಣೆಗಾರಿಕೆಯನ್ನು ಐಐಟಿ-ಕಾನ್ಪುರ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಹೆಗಲಿಗೆ ವಿದೇಶಾಂಗ ಇಲಾಖೆ ವಹಿಸಿದೆ. ಈ ಸಂಬಂಧ ನಾಶಿಕ್‌ನಲ್ಲಿರುವ ಭದ್ರತಾ ಪ್ರೆಸ್ ಸಹ ಕೆಲಸ ಮಾಡುತ್ತಿದೆ.