ನ್ಯೂಯಾರ್ಕ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಇಂದು ಟಿ20 ವಿಶ್ವಕಪ್ ಸಮರದಲ್ಲಿ ಮುಖಾಮುಖಿಯಾಗಲಿವೆ.
ನ್ಯೂಯಾರ್ಕ್ ನೌಸೌ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಭಾರತ ತಂಡ ಗೆಲ್ಲುವ ಫೇವರಿಟ್ ತಂಡವಾಗಿದೆ. ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು 12 ಬಾರಿ ಮುಖಾಮುಖಿಯಾಗಿದ್ದು, ಭಾರತ 9 ಸಲ, ಪಾಕಿಸ್ತಾನ ಮೂರು ಸಲ ಗೆಲುವು ಸಾಧಿಸಿದೆ.
ಉಗ್ರರ ದಾಳಿ ಹಿನ್ನೆಲೆ ಅಮೆರಿಕ ಅಧ್ಯಕ್ಷರ ಕಾರ್ಯಕ್ರಮ ರೀತಿ ಕ್ರಿಕೆಟ್ ಪಂದ್ಯಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದು, ಪಂದ್ಯದ ವೇಳೆ ಜಾಹೀರಾತು ಮೌಲ್ಯ ಏರಿಕೆಯಾಗಿ ಪ್ರತಿ ಸೆಕೆಂಡ್ ಗೆ 4 ಲಕ್ಷ ರೂ. ನಿಗದಿಪಡಿಸಲಾಗಿದೆ. ಬೆಟ್ಟಿಂಗ್ ಪ್ರಿಯರಿಗೆ ಭಾರತವೇ ಫೇವರಿಟ್ ತಂಡವಾಗಿದೆ.
ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸುಲಭವಾಗಿ ಜಯಗಳಿಸಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ, ಸೂರ್ಯ ಕುಮಾರ್, ರಿಷಬ್ ಪಂತ್, ರವೀಂದ್ರ ಜಡೇಜ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಹಾರ್ದಿಕ್ ಪಾಂಡ್ಯ ಆಲ್-ರೌಂಡ್ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋಲು ಕಂಡ ಪಾಕಿಸ್ತಾನ ಒತ್ತಡಕ್ಕೆ ಒಳಗಾಗಿದೆ. ಇಂದಿನ ಪಂದ್ಯವನ್ನು ಸೋತಲ್ಲಿ ಬಹುತೇಕ ಗುಂಪು ಹಂತದಲ್ಲಿ ಹೊರ ಬೀಳಬಹುದು.