ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣ್ತಿದೆ. ಆದ್ರೆ ಡೆಲ್ಟಾ ಪ್ಲಸ್ ಭಯ ಶುರುವಾಗಿದೆ. ಈ ಮಧ್ಯೆ ಕೊರೊನಾ ಲಸಿಕೆ ಅಭಿಯಾನದ ವೇಗ ಹೆಚ್ಚಾಗಿದೆ. ಭಾರತದಲ್ಲಿ 32 ಕೋಟಿಗೂ ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ. ಭಾನುವಾರ 17, 21 268 ಲಸಿಕೆಗಳನ್ನು ನೀಡಲಾಗಿದೆ.
ಲಸಿಕೆ ಅಭಿಯಾನದಲ್ಲಿ ಭಾರತ ದಾಖಲೆ ಬರೆದಿದೆ. ಭಾರತವು ವಿಶ್ವದಲ್ಲೇ ಹೆಚ್ಚು ಲಸಿಕೆ ಹಾಕಿದ ದೇಶವಾಗಿದೆ. ಗ್ಲೋಬಲ್ ಲಸಿಕೆ ಟ್ರ್ಯಾಕರ್ ವರದಿಯ ಪ್ರಕಾರ, ಬ್ರಿಟನ್, ಅಮೆರಿಕ, ಇಟಲಿ, ಜರ್ಮನಿ, ಫ್ರಾನ್ಸ್ ಮತ್ತು ಭಾರತದಲ್ಲಿ ಲಸಿಕೆ ವೇಗ ಹೆಚ್ಚಿದೆ. ಭಾರತದಲ್ಲಿ ಈ ವರ್ಷದ ಜನವರಿ 16 ರಿಂದ ಲಸಿಕೆ ಅಭಿಯಾನ ಶುರುವಾಗಿದೆ. ಬ್ರಿಟನ್‌ನಲ್ಲಿ ಡಿಸೆಂಬರ್ 8 ರಂದು, ಯುಎಸ್ನಲ್ಲಿ ಡಿಸೆಂಬರ್ 14 ರಂದು, ಇಟಲಿ, ಜರ್ಮನಿ ಮತ್ತು ಫ್ರಾನ್ಸ್ ನಲ್ಲಿ ಡಿಸೆಂಬರ್ 27 ರಂದು ಲಸಿಕೆ ಅಭಿಯಾನ ಶುರುವಾಗಿದೆ.
ಜೂನ್ 28 ರ ಸೋಮವಾರ ಬೆಳಿಗ್ಗೆ 8 ಗಂಟೆಯವರೆಗೆ ಬ್ರಿಟನ್‌ನಲ್ಲಿ 7 ಕೋಟಿ, 67 ಲಕ್ಷದ 74 ಸಾವಿರ 990 ಮಂದಿಗೆ ಲಸಿಕೆ ಹಾಕಲಾಗಿದೆ. ಅಮೆರಿಕಾದಲ್ಲಿ 32 ಕೋಟಿ, 33 ಲಕ್ಷ, 27 ಸಾವಿರ 328 ಮಂದಿಗೆ ಲಸಿಕೆ ಹಾಕಲಾಗಿದೆ. ಇಟಲಿಯಲ್ಲಿ 4 ಕೋಟಿ 96 ಲಕ್ಷ 50 ಸಾವಿರ 721 ಮಂಡಿ ಹಾಗೂ ಜರ್ಮನಿಯಲ್ಲಿ 7 ಕೋಟಿ 14 ಲಕ್ಷ 37 ಸಾವಿರ 514 ಮಂದಿಗೆ ಲಸಿಕೆ ಹಾಕಲಾಗಿದೆ. ಭಾರತದಲ್ಲಿ 32 ಕೋಟಿ, 36 ಲಕ್ಷ 63 ಸಾವಿರದ 297 ಮಂದಿಗೆ ಲಸಿಕೆ ಹಾಕಲಾಗಿದೆ.
ಭಾರತದಲ್ಲಿ ಆನ್‌ಲೈನ್ ಮತ್ತು ಆನ್‌ಸೈಟ್ ನೋಂದಣಿ ವ್ಯವಸ್ಥೆಯಿದೆ. ಲಸಿಕೆ ಪಡೆಯುವ ನಾಗರಿಕರು ಕೋ-ವಿನ್ ಪೋರ್ಟಲ್, ಆರೋಗ್ಯ ಸೇತು ಮತ್ತು ಉಮಾಂಗ್ ಆ್ಯಪ್ ಮೂಲಕ ಲಸಿಕೆ ಪಡೆಯಬಹುದು. ಲಸಿಕೆ ಬಗ್ಗೆ ಯಾವುದೇ ವದಂತಿಗೆ ಕಿವಿಗೊಡಬೇಡಿ ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.