ನವದೆಹಲಿ: ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ಸ್ಪಷ್ಟ ನಿಲುವು ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಮಾರ್ಚ್ ನಿಂದ ಇಡೀ ದೇಶವನ್ನು ಲಾಕ್ಡೌನ್ ಮಾಡಿದ್ದ ಕೇಂದ್ರ ಸರ್ಕಾರವೇ ಪರಿಹಾರವನ್ನು ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಮಾರ್ಚ್ ನಿಂದ ಆಗಸ್ಟ್ ಅಂತ್ಯದವರೆಗಿನ ಸಾಲ ಮರುಪಾವತಿಯ ಮೇಲಿನ ಬಡ್ಡಿ ಮನ್ನಾ ಮಾಡುವ ಕುರಿತಾಗಿ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ಕೈಗೊಳ್ಳಬೇಕು. ಸೆಪ್ಟೆಂಬರ್ 1ರ ಒಳಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.
ಲಾಕ್ ಡೌನ್ ಘೋಷಣೆಯಾದ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ಆರ್ಥಿಕ ಪರಿಹಾರ ಕ್ರಮಗಳನ್ನು ಘೋಷಿಸಿದೆ. ಆದರೆ, ಬ್ಯಾಂಕ್ ಸಾಲ ಮರುಪಾವತಿ ಮೇಲಿನ ಬಡ್ಡಿ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕೆಂದು ಸುಪ್ರೀಂಕೋರ್ಟ್ ನ್ಯಾಯಪೀಠ ತಿಳಿಸಿದೆ.
ಈ ಹಿಂದೆ ಆರ್ಬಿಐ ಬಡ್ಡಿಮನ್ನಾ ಮಾಡಿದಲ್ಲಿ ಬ್ಯಾಂಕ್ ಉದ್ಯಮದ ದೊಡ್ಡ ಪೆಟ್ಟು ಬೀಳಲಿದೆ ಎಂದು ತಿಳಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್ ನ್ಯಾಯಪೀಠ, ರಿಸರ್ವ್ ಬ್ಯಾಂಕ್ ಮೇಲೆ ಏಕೆ ಅವಲಂಬಿತರಾಗಿದ್ದೀರಿ? ಇದು ನೈಸರ್ಗಿಕ ವಿಕೋಪ ಎಂದು ತಿಳಿದು ಪರಿಹಾರ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ದೇಶವನ್ನೇ ಲಾಕ್ಡೌನ್ ಮಾಡಿದ ನೀವೇ ಪರಿಹಾರ ಕೊಡಬೇಕೆಂದು ಹೇಳಿದೆ ಎನ್ನಲಾಗಿದೆ.