ಕೋವಿಡ್ ನಿರೋಧಕ ಲಸಿಕೆಗಳನ್ನು ತೆಗೆದುಕೊಳ್ಳುವ ವಿಚಾರವಾಗಿ ದೇಶವಾಸಿಗಳಲ್ಲಿ ಭಾರೀ ಹಿಂಜರಿಕೆಗಳಿದ್ದು, ಈ ಚುಚ್ಚುಮದ್ದಿನಿಂದ ಏನಾದರೂ ಸೈಡ್ ಎಫೆಕ್ಟ್‌ಗಳು ಸಂಭವಿಸಬಹುದಾ ಎಂಬ ಆತಂಕ ಸುಸ್ಪಷ್ಟವಾಗಿ ಗೋಚರಿಸುತ್ತಿದೆ.
ಮೊದಲ ಸುತ್ತಿನಲ್ಲಿ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆ ಹಾಕಲಾಗುತ್ತಿದ್ದು, ಅನೇಕ ಮಂದಿ ತಾವು ಲಸಿಕೆ ತೆಗೆದುಕೊಳ್ಳುತ್ತಿರುವ ವಿಷಯವನ್ನು ತಮ್ಮ ಕುಟುಂಬಸ್ಥರಿಗೆ ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
“ಲಸಿಕೆ ಹಾಕಿಸಿಕೊಂಡ ಬಳಿಕ ಪ್ರತಿಕ್ರಿಯೆಗಳು ಆಗುವ ವರದಿಗಳು ಬರುತ್ತಿವೆ. ಆದ್ದರಿಂದ ಒಂದು ರೀತಿಯ ಆತಂಕ ನೆಲೆಸಿದೆ. ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೆರಿಯಾ ಖುದ್ದು ಈ ಲಸಿಕೆ ಹಾಕಿಸಿಕೊಂಡಿದ್ದನ್ನು ಓದಿದ ಬಳಿಕ ನಾನೂ ಚುಚ್ಚುಮದ್ದು ತೆಗೆದುಕೊಳ್ಳಲು ಮುಂದಾದೆ. ಲಸಿಕೆ ತೆಗೆದುಕೊಂಡ ಆರಂಭದ ಕ್ಷಣಗಳಲ್ಲಿ ಒಂದು ರೀತಿಯ ಆಲಸ್ಯ ಉಂಟಾಗಿತ್ತು. ನನ್ನ ಕುಟುಂಬವೂ ಸಹ ಆತಂಕ್ಕೀಡಾಗಿದ್ದ ಕಾರಣ ನಾನು ಈ ವಿಷಯವನ್ನು ಹಂಚಿಕೊಳ್ಳಲಿಲ್ಲ” ಎಂದು ಆಗ್ನೇಯ ದೆಹಲಿಯ ಮೂಲ್ಚಂದ್ ಮೆಡಿಸಿಟಿಯಲ್ಲಿ ನರ್ಸಿಂಗ್ ಸಿಬ್ಬಂದಿಯಾಗಿರುವ 24 ವರ್ಷದ ಜೇ ಮಹಾವೀರ್ ಹೇಳುತ್ತಾರೆ.
“ಇದರಲ್ಲಿ ಭಯ ಪಡುವಂಥದ್ದು ಏನೂ ಇಲ್ಲ. ಇದುವರೆಗೂ ನನಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್‌ನ ಅನುಭವವಾಗಿಲ್ಲ” ಎನ್ನುತ್ತಾರೆ ಮಹಾವೀರ್ ಸಹೋದ್ಯೋಗಿ ರಿತಿಕ್ ಭಾಟಿ.
ಸೀರಮ್ ಸಂಸ್ಥೆಯ ಆಕ್ಸ್‌ಫರ್ಡ್ ಕೋವಿಶೀಲ್ಡ್ ಹಾಗೂ ದೇಶೀಯವಾಗಿ ನಿರ್ಮಿಸಲಾಗಿರುವ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗಳನ್ನು ತುರ್ತು ಬಳಕೆಯ ಅಡಿ ಉಪಯೋಗಿಸಲು ಸರ್ಕಾರದ ಅನುಮತಿ ದೊರಕಿದೆ.