ದೇಶದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಸಾರ್ವಜನಿಕರು ದಿನನಿತ್ಯವೂ ಆತಂಕದಲ್ಲೇ ಕಾಲ ಕಳೆಯುವಂತಾಗಿದ್ದು, ಲಸಿಕೆ ಯಾವಾಗ ಬರುತ್ತದೋ ಎಂಬ ನಿರೀಕ್ಷೆಯಲ್ಲಿದ್ದಾರೆ.
ಇದರ ಮಧ್ಯೆ ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅದಾರ್ ಪೂನಾವಾಲಾ ಆತಂಕಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ಲಸಿಕೆ ಶೀಘ್ರದಲ್ಲೇ ಕಂಡು ಹಿಡಿದರೂ ಸಹ ಅದು ಎಲ್ಲರಿಗೆ ಲಭ್ಯವಾಗುವಂತೆ ಮಾಡಲು ಇನ್ನು 4 ವರ್ಷ ಬೇಕು ಎಂದು ಅವರು ತಿಳಿಸಿದ್ದು, ಲಸಿಕೆ ಕಂಡು ಹಿಡಿಯುವ ಧಾವಂತದಲ್ಲಿ ಬೃಹತ್ ಪ್ರಮಾಣದಲ್ಲಿ ಇದನ್ನು ತಯಾರಿಸುವ ಕುರಿತು ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.