ಸಂಚಾರಿ ನಿಯಮಾವಳಿಯ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಟಾಟಾ ಸನ್ಸ್‌ನ ರತನ್ ಟಾಟಾ ಕಾರ್ಯಾಲಯಕ್ಕೆ ಇ-ಚಲನ್ ಒಂದನ್ನು ಇತ್ತೀಚೆಗೆ ಕಳುಹಿಸಲಾಗಿತ್ತು. ಚಲನ್ ನೋಡಿ ದಂಗುಬಡಿದ ರತನ್ ಕಚೇರಿಯ ಅಧಿಕಾರಿಗಳು, ತಮ್ಮ ಕಾರಿನಿಂದ ಯಾವುದೇ ಅಪಘಾತವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣ ಸಂಬಂಧ ಆಳವಾದ ತನಿಖೆ ನಡೆಸಿದ ಪೊಲೀಸರಿಗೆ, ರತನ್ ಟಾಟಾರ ಕಾರಿನ ನೋಂದಣಿ ಸಂಖ್ಯೆಯನ್ನು ಮಹಿಳೆಯೊಬ್ಬರು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಇದೀಗ ಈ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಬಂಧಪಟ್ಟ ಇ-ಚಲನ್ ಸೃಷ್ಟಿ ಮಾಡಿದ ಜಾಗದಲ್ಲಿದ್ದ ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ಪೊಲೀಸರಿಗೆ ಈ ವಿಷಯ ತಿಳಿದು ಬಂದಿದೆ.
ನರೇಂದ್ರ ಫಾರ್ವರ್ಡರ್ಸ್ ಹೆಸರಿನ ಸಂಸ್ಥೆಯನ್ನು ನಡೆಸುತ್ತಿರುವ ಗೀತಾಂಜಲಿ ಶಾ, ಸರಕು ಸಾಗಾಟ ಕಂಪನಿಯಲ್ಲಿ ಕಸ್ಟಮ್ಸ್ ಹೌಸ್‌ನ ನಿರ್ದೇಶಕರಾಗಿದ್ದಾರೆ.
“ಸಂಖ್ಯಾಶಾಸ್ತ್ರಜ್ಞರೊಬ್ಬರ ಸಲಹೆ ಮೇರೆಗೆ ತಮ್ಮ ಕಾರಿನ ನೋಂದಣಿ ಸಂಖ್ಯೆಯ ಪ್ಲೇಟ್‌ಗೆ ರತನ್ ಟಾಟಾ ಕಾರಿನ ಸಂಖ್ಯೆಯನ್ನು ಆಪಾದಿತ ಮಹಿಳೆ ಹಾಕಿದ್ದಾರೆ. ರತನ್ ಟಾಟಾರಿಗೆ ಕಳುಹಿಸಿದ ಎಲ್ಲಾ ಇ-ಚಲನ್‌ಗಳನ್ನು ಆಪಾದಿತ ಮಹಿಳೆಗೆ ವರ್ಗಾಯಿಸಲಾಗಿದೆ” ಎಂದು ವಿಚಾರಣಾಧೀನ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.