ನಾಗಪುರ: ಅತ್ಯಾಚಾರಕ್ಕೊಳಗಾದ 22 ವರ್ಷದ ನೇಪಾಳಿ ಯುವತಿಯೊಬ್ಬಳು ಜೀವ ಭಯದಿಂದ 800 ಕಿಮೀ ದೂರ ಬಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಲಖನೌನಲ್ಲಿ ಘಟನೆ ನಡೆದಿದ್ದು, ಮಹಿಳೆ ಮಹಾರಾಷ್ಟ್ರದ ನಾಗಪುರ ಕೊರಾಡಿ ಪೊಲೀಸ್ ಠಾಣೆಗೆ ಬಂದು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ ಎಂದು ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಜೀರ್ ಶೇಖ್ ಮಾಹಿತಿ ನೀಡಿದ್ದಾರೆ.
2018 ರಲ್ಲಿ ನೇಪಾಳದಿಂದ ಉತ್ತರ ಪ್ರದೇಶದ ಲಖನೌಗೆ ಕೆಲಸಕ್ಕೆ ಬಂದ ಯುವತಿ ಫೈಜಾಬಾದ್ ರಸ್ತೆಯಲ್ಲಿನ ಬಾಡಿಗೆ ಮನೆಯಲ್ಲಿ ಕಳೆದ ಮಾರ್ಚ್‌ವರೆಗೂ ವಾಸವಿದ್ದಳು. ಬಾಡಿಗೆ ಮನೆಯ ಮಾಲಕಿ ಈಕೆಗೆ ದುಬೈನಲ್ಲಿರುವ ಸಾಫ್ಟ್‌ವೇರ್ ಇಂಜಿನಿಯರ್ ಪ್ರವೀಣ ರಾಜ್ಪಾಲ್ ಯಾದವ್ ಎಂಬಾತನನ್ನು ಪರಿಚಯಿಸಿದ್ದರು. ಇಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು.
ಕಳೆದ ಕೆಲ ದಿನಗಳ ನಂತರ ಲಖನೌಗೆ ಬಂದ ಪ್ರವೀಣ ರಾಜ್ಪಾಲ್ ಯಾದವ್ ಹೋಟೆಲ್ ಒಂದರಲ್ಲಿ ರೂಂ ಬುಕ್ ಮಾಡಿ ನೇಪಾಳಿ ಯುವತಿಯನ್ನು ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ. ಅಲ್ಲದೆ, ಅದರ ವಿಡಿಯೋ, ಫೋಟೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಇದನ್ನು ಪೊಲೀಸರಿಗೆ ತಿಳಿಸದಂತೆಯೂ ಬೆದರಿಸಿದ್ದ.
ಆತನ ಭಯದಿಂದ ಯುವತಿ ಸೆ. 30 ರಂದು ನಾಗಪುರದಲ್ಲಿರುವ ತನ್ನ ನೇಪಾಳಿ ಸ್ನೇಹಿತೆಯ ಮನೆಗೆ ಹೇಗೋ ತಪ್ಪಿಸಿಕೊಂಡು ಬಂದಿದ್ದಳು. ಆಕೆಯ ಜತೆ ಠಾಣೆಗೆ ತೆರಳಿ ಎಫ್‌ಐಆರ್ ದಾಖಲಿಸಿದ್ದಾಳೆ. ಎಲ್ಲಿ ಬೇಕಾದರೂ ಎಫ್‌ಐಆರ್ ದಾಖಲಿಸಿ ನಂತರ ಪ್ರಕರಣವನ್ನು ಘಟನೆ ನಡೆದ ಸಂಬಂಧಪಟ್ಟ ಠಾಣೆಗೆ ಹಸ್ತಾಂತರಿಸುವ ಝೀರೋ ಎಫ್‌ಐಆರ್ ವ್ಯವಸ್ಥೆ ಜಾರಿಯಲ್ಲಿದೆ. ಈಗ ಅತ್ಯಾಚಾರದ ಎಫ್‌ಐಆರ್ ಹಸ್ತಾಂತರಕ್ಕಾಗಿ ನಾಗಪುರ ಡಿಸಿಪಿ ಸ್ವತಃ ಲಖನೌಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.