ಕೊರೊನಾ ಲಾಕ್ ಡೌನ್ ಪರಿಣಾಮದಿಂದಾಗಿ ಮುಂಬೈನಲ್ಲಿ ಕೆಲಸ, ಮನೆ ಕಳೆದುಕೊಂಡಾಕೆ 1800 ಕಿ.ಮೀ. ದೂರದ ಜೆಮ್ ಶೆಡ್ ಪುರಕ್ಕೆ ಬೈಕ್ ನಲ್ಲೇ ತೆರಳಿದ ಸಾಹಸಗಾಥೆ ಇದು.
ಜೆಮ್ ಶೆಡ್ ಪುರ ಮೂಲದ ಸೋನಿಯಾ ದಾಸ್ ಪತಿ ಹೃದ್ರೋಗದ ಹಿನ್ನೆಲೆಯಲ್ಲಿ 2 ವರ್ಷದ ಹಿಂದೆ ಕೆಲಸ ಕಳೆದುಕೊಂಡಿದ್ದರು. ಸಂಸಾರ ನಡೆಸುವುದು ಕಷ್ಟ ಎನಿಸುವಷ್ಟರಲ್ಲಿ ಮುಂಬೈನಲ್ಲಿ ಕೆಲಸ ಮಾಡಲು ನಿಶ್ಚಯಿಸಿದ ಸೋನಿಯಾ, ಫೆಬ್ರವರಿಯಲ್ಲಿ ಮುಂಬೈನಲ್ಲಿ ಕೆಲಸ ಪಡೆದು ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಕೊರೊನಾ ಸೋಂಕು ವ್ಯಾಪಕವಾದ್ದರಿಂದ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಯಿತು. ರಾತ್ರೋ ರಾತ್ರಿ ಕೆಲಸ ಹೋಯಿತು, ಕೈಯಲ್ಲಿ ಹಣವಿಲ್ಲದಾಯಿತು, ಮನೆ ಖಾಲಿ ಮಾಡುವ ಪರಿಸ್ಥಿತಿ ಬಂತು. ದಿಕ್ಕು ತೋಚದಂತಾಯಿತು. ಅತ್ತ ಜೆಮ್ ಶೆಡ್ ಪುರದಲ್ಲಿನ ಗಂಡ, 5 ವರ್ಷದ ಮಗನ ಕಥೆ ಏನಾಗಿದೆಯೋ ಏನೋ ಎನ್ನುವ ಚಿಂತೆ ಶುರುವಾಯಿತು. ಸಾರಿಗೆ ಸೌಲಭ್ಯಗಳಿಲ್ಲ, ಹೋಗುವುದಾದರೂ ಹೇಗೆ ? ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಲಿಲ್ಲ.
ಕೊನೆಗೆ ಸ್ನೇಹಿತೆ ಸಬಿಯಾ ಬಾನೋ ಜೊತೆ ಸ್ಕೂಟರ್ ಏರಿದ ಸೋನಿಯಾ, 10 ಕಡೆ ಪೆಟ್ರೋಲ್ ತುಂಬಿಸಿಕೊಳ್ಳಲು ಹಾಗೂ 3 ಢಾಬಾ ಬಿಟ್ಟರೆ 1800 ಕಿ.ಮೀ. ದೂರದ ಪ್ರಯಾಣದಲ್ಲಿ ಬೇರೆಲ್ಲೂ ನಿಲ್ಲಿಸದೆ ಸಾಗಿದ್ದಾರೆ. ಜೆಮ್ಶೆಡ್ ಪುರ ತಲುಪಿದರೂ ಗಂಡ, ಮಗನನ್ನು ನೋಡಲಾಗಲಿಲ್ಲ. 14 ದಿನ ಕ್ವಾರಂಟೈನ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿ ಮಾತನಾಡಲು ಸ್ಥಳೀಯ ಆಡಳಿತ ಸಹಕರಿಸಿದ್ದು, ಅವರಿಗೆ ದಿನಸಿ ತಲುಪಿಸುವ ವ್ಯವಸ್ಥೆಯೂ ಆಯಿತು. ಕೊರೋನಾ ನೆಗಟಿವ್ ಬಂದ ಹಿನ್ನೆಲೆಯಲ್ಲಿ ಮನೆ ತಲುಪಲು ಸೋನಿಯಾಗೆ ಅನುಮತಿ ಸಿಕ್ಕಿತು.