ನವದೆಹಲಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಡ್ರೆಸ್ ಹಾಕಿ ಕೊರೊನಾ ನಿಯಮಾವಳಿ ಉಲ್ಲಂಘನೆಗಾಗಿ ನಕಲಿ ಚಲನ್ ಸೃಷ್ಟಿ ಮಾಡಿ ಹಣ ಲಪಟಾಯಿಸುತ್ತಿದ್ದ 420 ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಹೊರ ವಲಯದ ನಂಗ್ಲೊಯ್ ಪ್ರದೇಶದ ತಮನ್ನಾ ಜಹಾನ್(20)ಎಂಬಾಕೆಯನ್ನು ಪಶ್ಚಿಮ ದೆಹಲಿಯ ತಿಲಕ್ ನಗರದಲ್ಲಿ ಬಂಧಿಸಲಾಗಿದೆ.
ಹೆಡ್ ಕಾನ್ಸ್‌ಟೇಬಲ್ ಸುಮೇರ್ ಸಿಂಗ್ ಪೆಟ್ರೋಲಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಮಹಿಳಾ ಪಿಎಸ್‌ಐ ಒಬ್ಬಳು ಜನರನ್ನು ನಿಲ್ಲಿಸಿ ಮಾಸ್ಕ್ ಹಾಕದಿರುವುದಕ್ಕೆ ದಂಡ ವಸೂಲಿ ಮಾಡಿ ರಶೀದಿ ನೀಡುತ್ತಿರುವುದನ್ನು ಗಮನಿಸಿದ್ದರು.
ಅನುಮಾನಗೊಂಡ ಅವರು ಮತ್ತೊಬ್ಬ ಕಾನ್ಸ್‌ಟೇಬಲ್ ಅಶೋಕ ಅವರಿಗೆ ಪೊಲೀಸ್ ಸಮವಸ್ತ್ರ ಧರಿಸದೇ ಬಂದು ಪರಿಶೀಲಿಸುವಂತೆ ತಿಳಿಸಿದ್ದರು. ಅದರಂತೆ ಮಫ್ತಿಯಲ್ಲಿ ಮಾಸ್ಕ್ ಧರಿಸದೇ ಬಂದ ಅಶೋಕ ಅವರನ್ನು ಗುರುತಿಸದ ನಕಲಿ ಪೊಲೀಸಮ್ಮ ಅವರನ್ನು ತಡೆದು ದಂಡ ತುಂಬುವಂತೆ ಸೂಚಿಸಿದ್ದಳು.
ಕಾನ್ಸ್‌ಟೇಬಲ್ ಅಶೋಕ ‘ನೀವು ಯಾವ ಠಾಣೆಯವರು..?’ ಎಂದು ವಿಚಾರಿಸಿದ್ದ. ಆಕೆ ತಿಲಕ್ ನಗರ ಎಂದು ಹೇಳಿದ್ದಳು. ಗುರುತಿನ ಚೀಟಿ ನೀಡುವಂತೆ ಕೇಳಿದಾಗ ಆಕೆ ಹೆದರಿ ಕಂಗಾಲಾಗಿದ್ದಳು.
ತಕ್ಷಣ ಕಾನ್ಸ್‌ಟೇಬಲ್ ಅಶೋಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಆಕೆಯನ್ನು ಬಂಧಿಸಲಾಗಿದೆ.
‘ಪಾಲಕರ ಇಚ್ಛೆಗೆ ವಿರುದ್ಧವಾಗಿ ಇತ್ತೀಚೆಗೆ ವಿವಾಹವಾದೆ. ಜೀವನಕ್ಕೆ ಯಾವುದೇ ವರಮಾನ ಇರಲಿಲ್ಲ, ಇದರಿಂದ ಈ ದಂಧೆಗಿಳಿದೆ’ ಎಂದು ಆಕೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.