ಜೈಸಲ್ಮೇರ್: ರಾಜಸ್ಥಾನದ ಬಾರ್ಮೆರ್ ಜಿಲ್ಲೆಯ ಬಾಲೋಟರಾ ಪಟ್ಟಣದಲ್ಲಿ ಮಹಿಳೆಯೊಬ್ಬಳು ಪ್ರಿಯಕರನ ಭೇಟಿಗೆ ಕುಟುಂಬ ಸದಸ್ಯರಿಗೆ ನಿದ್ದೆ ಮಾತ್ರೆ ಕೊಟ್ಟಿದ್ದಾಳೆ. ಇದರಿಂದ ಆರೋಗ್ಯದಲ್ಲಿ ಏರುಪೇರು ಆಗಿ ಅತ್ತೆ ಮೃತಪಟ್ಟಿದ್ದು ಕುಟುಂಬದ ಉಳಿದ ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜೂನ್ 28 ರಂದು ಘಟನೆ ನಡೆದಿದ್ದು ಜುಲೈ 1 ರಂದು ಬಾಲೋಟರಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ತನಿಖೆ ನಡೆಸಿದ ಪೊಲೀಸರು ಬುಧವಾರ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮಹಿಳೆ ಪ್ರೇಮಿಯೊಂದಿಗೆ ನೂರಾನಿ ಮೊಹಲ್ಲಾದ ಟೆಕ್ಸ್ ಟೈಲ್ ನಲ್ಲಿ ಕೆಲಸ ಮಾಡುತ್ತಿದ್ದಳು. ಲಾಕ್ಡೌನ್ ಕಾರಣದಿಂದ ಪ್ರಿಯಕರನ ಭೇಟಿಯಾಗಿರಲಿಲ್ಲ. ತಡರಾತ್ರಿ ಪ್ರಿಯಕರನ ಭೇಟಿಯಾಗುವ ಉದ್ದೇಶದಿಂದ ಮನೆಗೆ ಕರೆಸಿಕೊಂಡಿದ್ದಾಳೆ. ಕುಟುಂಬ ಸದಸ್ಯರಿಗೆ ಗೊತ್ತಾಗಬಾರದೆಂದು ಊಟದಲ್ಲಿ ನಿದ್ದೆ ಮಾತ್ರೆ ಕೊಟ್ಟಿದ್ದು, ಇದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾದ ಕುಟುಂಬದ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಅತ್ತೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.