ದೇಶದಲ್ಲಿ ಕೊರೊನಾ ಎರಡನೆ ಅಲೆ ಜೋರಾಗಿರುವ ನಡುವೆಯೇ ವೈದ್ಯಕೀಯ ಸೌಲಭ್ಯಗಳಿಗೆ ಅಭಾವ ಉಂಟಾಗ್ತಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ನೋಯ್ಡಾದ ಕೊರೊನಾ ಸೋಂಕಿತ 35 ವರ್ಷದ ಮಹಿಳೆ ನೋಯ್ಡಾ ಆಸ್ಪತ್ರೆ ಎದುರಲ್ಲೇ ಜೀವಬಿಟ್ಟಿದ್ದಾರೆ. ನೋಯ್ಡಾದ ಜಿಮ್ಸ್ ಆಸ್ಪತ್ರೆ ಎದುರಲ್ಲಿ ಬೆಡ್ ಸಿಗದೇ ಕಾರಿನಲ್ಲೇ ಒದ್ದಾಡುತ್ತಿದ್ದ ಮಹಿಳೆ ಜೀವ ಬಿಟ್ಟಿದ್ದಾರೆ. ಮೃತ ಮಹಿಳೆ ಗ್ರೇಟರ್ ನೋಯ್ಡಾದಲ್ಲಿ ಇಂಜಿನಿಯರ್ ಆಗಿದ್ದರು.
ಇನ್ನು ಈ ವಿಚಾರವಾಗಿ ಮಾತನಾಡಿದ ಪ್ರತ್ಯಕ್ಷದರ್ಶಿ ಸಚಿನ್, ನಾವು ಇದೆಲ್ಲವನ್ನ ನೋಡುತ್ತಾ ಅಲ್ಲೇ ನಿಂತಿದ್ದೆ. ಆಕೆ ಜೊತೆ ಇದ್ದವರು ಆಸ್ಪತ್ರೆಯ ಬಳಿ ಧಾವಿಸಿದ್ದರು. ಆದರೆ ಯಾರೂ ಸಹಾಯ ಮಾಡಿದಂತೆ ಕಾಣುತ್ತಿರಲಿಲ್ಲ. ಮಧ್ಯಾಹ್ನ 3.30ರ ಸುಮಾರಿಗೆ ಅವರು ಕುಸಿದು ಬಿದ್ದರು. ಕೂಡಲೇ ರಿಸಪ್ಶನಿಸ್ಟ್ ಬಳಿ ಬಂದು ಆಕೆ ಉಸಿರಾಡುತ್ತಿಲ್ಲ ಎಂದು ಹೇಳುತ್ತಿದ್ದಂತೆಯೇ ಆಸ್ಪತ್ರೆ ಸಿಬ್ಬಂದಿ ಸೋಂಕಿತೆ ಬಳಿ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸೋಂಕಿತೆ ಕಾರಿನಲ್ಲಿ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಗಂಭೀರ ಸ್ವರೂಪ ತಾಳುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಳೆದ ವಾರವಷ್ಟೇ ರಾಜ್ಯದಲ್ಲಿ ಆಕ್ಸಿಜನ್ ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಆದರೆ ಉತ್ತರ ಪ್ರದೇಶದ ನೋಯ್ಡಾದ ಹಲವು ಕಡೆ ಸೋಂಕಿತರಿಗೆ ಬೆಡ್ ಸೌಕರ್ಯ ಸಿಗುತ್ತಿಲ್ಲ. ಆಕ್ಸಿಜನ್ ಅಭಾವ ಕೂಡ ಉಂಟಾಗಿದೆ.