ರಾಜಸ್ಥಾನದ ದುಂಗರ್ಪುರ್ ಕೋಟ್ವಾಲಿ ಠಾಣೆಯ ಮಹಿಳಾ ಪೊಲೀಸ್ ಪೇದೆ ಠಾಣೆಯಲ್ಲೇ ಅರಿಶಿಣ ಶಾಸ್ತ್ರ ಮಾಡಿಸಿಕೊಳ್ಳುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ. ಕೊರೊನಾ ಲಾಕ್ಡೌನ್ನಿಂದಾಗಿ ಅರಿಶಿಣ ಶಾಸ್ತ್ರಕ್ಕೆ ರಜೆ ಸಿಗದ ಹಿನ್ನೆಲೆ ಈಕೆ ಠಾಣೆಯಲ್ಲೇ ಅರಿಶಿಣ ಶಾಸ್ತ್ರ ಮಾಡಿಸಿಕೊಂಡಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಆಶಾ ಎಂಬ ಪೊಲೀಸ್ ಪೇದೆಯ ಮದುವೆ ನಿಶ್ಚಯವಾಗಿತ್ತು. ಆದರೆ ಕೊರೊನಾ ಹಿನ್ನೆಲೆ ಅವರ ಮದುವೆಯನ್ನ ಈ ವರ್ಷಕ್ಕೆ ಮುಂದೂಡಲಾಗಿತ್ತು.
ಇದೇ ಬರುವ 30ನೇ ತಾರೀಖಿನಂದು ಆಶಾ ಅವರ ಮದುವೆಯನ್ನ ಕುಟುಂಬಸ್ಥರು ನಿಶ್ಚಯಿಸಿದ್ದರು. ಆದರೆ ಈ ಬಾರಿ ಆಶಾಗೆ ಅರಿಶಿಣ ಶಾಸ್ತ್ರಕ್ಕೆ ರಜೆ ಸಿಗದ ಹಿನ್ನೆಲೆ ಠಾಣೆಯಲ್ಲೇ ಈ ಕಾರ್ಯಕ್ರಮವನ್ನ ಮಾಡಲಾಗಿದೆ.
ಆಶಾರ ಸಹೋದ್ಯೋಗಿಗಳು ಈ ಅರಿಶಿಣ ಶಾಸ್ತ್ರವನ್ನ ಮಾಡಿದ್ದಾರೆ. ಮಹಿಳಾ ಪೇದೆಯ ಕೆನ್ನೆಗೆ ಕೈಗೆಲ್ಲಾ ಅರಿಶಿಣ ಬಳಿದ ಸಹೋದ್ಯೋಗಿಗಳು ಮದುವೆ ಹಾಡನ್ನ ಹಾಡಿ ಸಂಭ್ರಮಿಸಿದ್ದಾರೆ. ಠಾಣೆಯಲ್ಲೇ ಅರಿಶಿಣ ಶಾಸ್ತ್ರದ ಎಲ್ಲಾ ಸಂಪ್ರದಾಯಗಳನ್ನ ಮಾಡಲಾಗಿದೆ.
ಆಶಾ ತಮ್ಮ ಅರಿಶಿಣ ಶಾಸ್ತ್ರಕ್ಕೆ ಗ್ರಾಮಕ್ಕೆ ಹೋಗಲು ಸಾಧ್ಯವಾಗ್ತಿಲ್ಲ ಎಂಬ ಕಾರಣಕ್ಕೆ ನಾವು ಠಾಣೆಯಲ್ಲೇ ಅರಿಶಿಣ ಶಾಸ್ತ್ರ ಆಯೋಜಿಸಿದೆವು. ನಿಗದಿತ ಮುಹೂರ್ತದಲ್ಲಿಯೇ ಅರಿಶಿಣ ಶಾಸ್ತ್ರ ನೆರವೇರಿದೆ ಎಂದು ಸ್ಟೇಷನ್ ಇನ್ಚಾರ್ಜ್ ದಿಲೀಪ್ ದಾನ್ ಹೇಳಿದ್ರು.
ಈ ಕಾರ್ಯ ಮುಗಿಯುತ್ತಿದ್ದಂತೆಯೇ ಆಕೆಗೆ ರಜೆಯನ್ನ ಸ್ಯಾಂಕ್ಷನ್ ಮಾಡಲಾಯ್ತು. ಹೀಗಾಗಿ ಆಶಾ ಇದೀಗ ಊರಿಗೆ ಪ್ರಯಾಣ ಬೆಳೆಸಿದ್ದಾರೆ ಎಂದೂ ದಾನ್ ಹೇಳಿದ್ದಾರೆ.