ನವದೆಹಲಿ: ಈ ವರ್ಷ ಕೊರೊನಾ ಸೋಂಕು, ಭಾರಿ ಮಳೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಆಘಾತಕಾರಿ ಮಾಹಿತಿ ಇಲ್ಲಿದೆ.
ಈ ಬಾರಿ ಚಳಿಯ ಪ್ರಮಾಣ ಹೆಚ್ಚಾಗಲಿದೆ. ಉತ್ತರಪ್ರದೇಶ, ಬಿಹಾರ, ರಾಜಸ್ಥಾನದಲ್ಲಿ ಚಳಿಯಿಂದ ಹೆಚ್ಚಿನ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಲಾ ನಿನೋ ಎಂಬ ಹವಾಮಾನ ವೈಪರೀತ್ಯ ಪರಿಣಾಮದಿಂದ ಚಳಿಯ ತೀವ್ರತೆ ಹೆಚ್ಚಾಗಲಿದೆ. ಈ ವರ್ಷ ಅತಿ ಹೆಚ್ಚು ಶೀತದ ವಾತಾವರಣ ಇರಲಿದೆ ಎಂದು ಹೇಳಲಾಗಿದೆ.
ಫೆಸಿಪಿಕ್ ಮಹಾಸಾಗರದಲ್ಲಿ ಭೂಮಧ್ಯ ರೇಖೆಯುದ್ದಕ್ಕೂ ಗಾಳಿ ಬೆಚ್ಚಗಿನ ಮೇಲ್ಮೈ ನೀರನ್ನು ಪಶ್ಚಿಮಕ್ಕೆ ತಳ್ಳುತ್ತದೆ. ಬೆಚ್ಚಗಿನ ನೀರು ಪಶ್ಚಿಮಕ್ಕೆ ಚಲಿಸುವ ಸಂದರ್ಭದಲ್ಲಿ ಆಳ ಸಮುದ್ರದಲ್ಲಿರುವ ತಣ್ಣೀರು ಮೇಲೆ ಬರುತ್ತದೆ.
ಇದರ ಪರಿಣಾಮದಿಂದ ಭಾರತದಲ್ಲಿ ಶೀತ ಮಾರುತಗಳು ಪ್ರಬಲವಾಗುತ್ತವೆ. ರಾಜಸ್ತಾನ, ಉತ್ತರ ಪ್ರದೇಶ, ಬಿಹಾರದಲ್ಲಿ ಚಳಿಯ ತೀವ್ರತೆಯಿಂದ ಹೆಚ್ಚಿನ ಸಾವು ಸಂಭವಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.