ಬಾಲಕಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರಗೈದಿದ್ದ ಸರ್ಕಾರಿ ಇಲಾಖೆ ನೌಕರನಿಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ನೀವು ಸಂತ್ರಸ್ತೆ 18 ವರ್ಷ ವಯಸ್ಸಿಗೆ ಬರ್ತಿದ್ದಂತೆಯೇ ಮದುವೆಯಾಗುತ್ತೀರಾ..? ಎಂದು ಕೇಳಿದೆ.
ಮಹಾರಾಷ್ಟ್ರದ ವಿದ್ಯುತ್ ನಿಗಮ ಇಲಾಖೆಯಲ್ಲಿ ಟೆಕ್ನಿಷಿಯನ್ ಆಗಿದ್ದ ವ್ಯಕ್ತಿಯೊಬ್ಬ ಬಾಲಕಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರಗೈದಿದ್ದ ಆರೋಪ ಎದುರಿಸುತ್ತಿದ್ದ. ಪ್ರಕರಣ ಸಂಬಂಧ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ಪೀಠ ಈ ಪ್ರಶ್ನೆಯನ್ನ ಆರೋಪಿ ಪರ ವಕೀಲರ ಎದುರು ಇಟ್ಟಿದೆ.
ನೀವು ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗುವ ಮುನ್ನವೇ ಯೋಚನೆ ಮಾಡಬೇಕಿತ್ತು. ನೀವು ಸರ್ಕಾರಿ ನೌಕರ ಅನ್ನೋದು ನಿಮಗೂ ತಿಳಿದಿದೆ. ನೀವು ಮದುವೆಯಾಗಲೇಬೇಕು ಎಂದು ನಾವು ಒತ್ತಡ ಹೇರುತ್ತಿಲ್ಲ. ಆದರೆ ನಿಮ್ಮ ಅಭಿಪ್ರಾಯವನ್ನ ಕೇಳುತ್ತಿದ್ದೇವೆ. ಇಲ್ಲ ಅಂದರೆ ನೀವು ಕೋರ್ಟ್ ಮದುವೆಯಾಗಲು ಒತ್ತಡ ಹೇರಿದೆ ಅನ್ನಬಹುದು. ಎಂದು ಅರ್ಜಿದಾರ ವಕೀಲರ ಬಳಿ ಕೇಳಿದೆ.
ನ್ಯಾಯಮೂರ್ತಿ ಬೋಬ್ಡೆ ನೇತೃತ್ವದ ಪೀಠ ಈ ಪ್ರಶ್ನೆಯನ್ನ ಕೇಳುತ್ತಿದ್ದಂತೆಯೇ ಅರ್ಜಿದಾರ ಪರ ವಕೀಲ ತನ್ನ ಕಕ್ಷಿದಾರನ ಜೊತೆ ಮಾತನಾಡಲು ಕೋರ್ಟ್ ಬಳಿ ಸಮಯಾವಕಾಶ ಕೇಳಿದ್ರು. ಕಕ್ಷಿದಾರನ ಬಳಿ ಮಾತನಾಡಿದ ಬಳಿಕ ವಕೀಲ ಕೋರ್ಟ್ ಎದುರು ಕಕ್ಷಿದಾರ ಆಕೆಯನ್ನ ಮದುವೆಯಾಗಲು ತಯಾರಿದ್ದರು. ಆದರೆ ಆಕೆ ಈ ಆಫರ್ ತಿರಸ್ಕರಿಸಿದ್ದಾಳೆ ಎಂದು ಹೇಳಿದ್ದಾರೆ.
ಅಲ್ಲದೇ ನಾನೀಗ ವಿವಾಹಿತನಾಗಿದ್ದು ಆಕೆಯನ್ನ ಮದುವೆಯಾಗುವ ಸ್ಥಿತಿಯಲ್ಲಿ ಇಲ್ಲ ಎಂದು ಕೋರ್ಟ್ಗೆ ಆರೋಪಿ ಹೇಳಿದ್ದಾರೆ.
9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನ ಹಿಂಬಾಲಿಸುತ್ತಿದ್ದ ಆರೋಪಿ ಒಂದು ದಿನ ಒತ್ತಾಯಪೂರ್ವಕವಾಗಿ ಆಕೆಯ ಮನೆಗೆ ಎಂಟ್ರಿ ಕೊಟ್ಟಿದ್ದು ಮಾತ್ರವಲ್ಲದೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ದೂರಿನಲ್ಲಿ ಸಂತ್ರಸ್ತೆ ಆರೋಪಿ ಲೈಂಗಿಕ ಸಂಪರ್ಕವನ್ನ ಮುಂದುವರಿಸದೇ ಹೋದಲ್ಲಿ ಆಸಿಡ್ ಎರಚೋದಾಗಿ ಹಾಗೂ ಆಕೆಯ ಸಹೋದರನನ್ನ ಕೊಲೆ ಮಾಡೋದಾಗಿ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.
ಈ ಸಂಬಂಧ 2019ರ ಡಿಸೆಂಬರ್ 17ರಂದು ಮಹಾರಾಷ್ಟ್ರದ ಜಲಗಾಂವ್ನಲ್ಲಿ ಎಫ್ಐಆರ್ ದಾಖಲಾಗಿತ್ತು.