ಕೊರೊನಾ ವೈರಸ್‌ಗೆ ಚುಚ್ಚುಮದ್ದು ಕಂಡುಹಿಡಿಯಲು ಜಗತ್ತಿನಾದ್ಯಂತ ಯತ್ನಗಳು ಸಾಗುತ್ತಿವೆ. ಬಹಳಷ್ಟು ಚುಚ್ಚುಮದ್ದುಗಳ ಪ್ರಯೋಗಗಳು ಮೂರನೇ ಹಂತದಲ್ಲಿದ್ದು, ವೈರಾಣುಗಳ ವಿರುದ್ಧ ಮದ್ದು ಆದಷ್ಟು ಬೇಗ ಬರಲಿದೆ ಎಂಬ ಭರವಸೆಗಳನ್ನು ಹುಟ್ಟಿಸುತ್ತಲೇ ಇವೆ.
ಆದರೆ ಈ ಕೋವಿಡ್-19 ಚುಚ್ಚುಮದ್ದಿನ ಬೆಲೆ ಎಷ್ಟಾಗಬಹುದು ಹಾಗೂ ಈಗಾಗಲೇ ಚಾಲ್ತಿಯಲ್ಲಿರುವ ವಿಮಾ ಯೋಜನೆಗಳ ಅಡಿಯಲ್ಲಿ ಚುಚ್ಚುಮದ್ದಿನ ಖರ್ಚನ್ನು ಸೇರಿಸಿಕೊಳ್ಳಬಹುದೇ ಎಂಬ ಪ್ರಶ್ನೆಗಳು ಎಲ್ಲೆಡೆ ಹುಟ್ಟಿಕೊಂಡಿವೆ. ಕೆಲವೇ ಕೆಲವು ಆರೋಗ್ಯ ವಿಮಾ ಏಜೆನ್ಸಿಗಳು ಈ ಖರ್ಚನ್ನು ಭರಿಸಲು ಮುಂದೆ ಬಂದಿವೆ ಎಂದು ತಿಳಿದುಬಂದಿದೆ.
ಹೊರ ರೋಗಿ ವಿಭಾಗ (OPD) ಸಂಬಂಧಿ ಖರ್ಚುಗಳ ವೆಚ್ಚವನ್ನು ವ್ಯಾಪ್ತಿಗೆ ತಂದುಕೊಳ್ಳುವ ಆರೋಗ್ಯ ವಿಮಾ ಯೋಜನೆಗಳು ಸಂಭವನೀಯ ಕೋವಿಡ್-19 ಚುಚ್ಚುಮದ್ದಿನ ವೆಚ್ಚಗಳನ್ನು ಭರಿಸುವ ಸಾಧ್ಯತೆಗಳು ಹೆಚ್ಚಾಗಿ ಇವೆ. ಆದರೆ ಈ OPD ವಿಮಾ ಯೋಜನೆಗಳು ದುಬಾರಿಯಾಗಿವೆ.
ಸಾಮಾನ್ಯವಾಗಿ OPD ವಿಮಾ ವ್ಯಾಪ್ತಿಯಲ್ಲಿ ವೈದ್ಯರ ಕನ್ಸಲ್ಟೇಷನ್ ವೆಚ್ಚ, ಮದ್ದುಗಳ ವೆಚ್ಚ ಹಾಗೂ ಚುಚ್ಚುಮದ್ದಿನ ವೆಚ್ಚವನ್ನು ಭರಿಸಲಾಗುವುದು. ಇವುಗಳೊಂದಿಗೆ ಅನೇಕ ವಿಮಾ ಏಜೆನ್ಸಿಗಳು ಲಾಂಚ್ ಮಾಡಿರುವ ಯೋಜನೆಗಳಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಅಗತ್ಯವಾದ PPE ಕಿಟ್‌ಗಳು ಹಾಗೂ ಗೃಹ ಚಿಕಿತ್ಸೆಗೆ ಅಗತ್ಯವಾದ ಇತರ ಸೇವೆಗಳನ್ನೂ ಸಹ ಕವರ್ ಮಾಡುವ ಸಾಧ್ಯತೆಗಳನ್ನು ಕೊಡಮಾಡಿವೆ.
ಕೋವಿಡ್-19ನಂಥ ಸಾಂಕ್ರಮಿಕಗಳನ್ನು ಎದುರಿಸಲು ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳನ್ನು ವಿಮೆಯ ವ್ಯಾಪ್ತಿಯಲ್ಲಿ ಒಳಗೊಳ್ಳಲು ಅನೇಕ ವಿಮಾ ಸಂಸ್ಥೆಗಳು ಚಿಂತನೆ ನಡೆಸಿವೆ ಎಂದು ಮ್ಯಾಕ್ಸ್ ಬ್ಯೂಪಾ ಆರೋಗ್ಯ ವಿಮೆಯ ನಿರ್ದೇಶಕ ಭಬತೋಶ್ ಮಿಶ್ರಾ ತಿಳಿಸಿದ್ದಾರೆ.