ಮೃತ ಮಗನ ಸಂಗ್ರಹಿಸಿಟ್ಟಿದ್ದ ವೀರ್ಯಾಣುವನ್ನ ತನ್ನ ವಶಕ್ಕೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದ ತಂದೆಯ ಮನವಿಯನ್ನ ತಿರಸ್ಕರಿಸಿದ ಕೋಲ್ಕತ್ತಾ ಹೈಕೋರ್ಟ್, ಮೃತ ವ್ಯಕ್ತಿಯನ್ನ ಹೊರತುಪಡಿಸಿದ್ರೆ ಆತನ ವೀರ್ಯಾಣುಗಳ ಮೇಲೆ ಅಧಿಕಾರ ಇರೋದು ಕೇವಲ ಆತನ ಪತ್ನಿಗೆ ಮಾತ್ರ ಎಂದು ಹೇಳಿದೆ.
ಅರ್ಜಿ ಸಂಬಂಧ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಸಭ್ಯಸಾಚಿ ಭಟ್ಟಾಚಾರ್ಯ, ಅರ್ಜಿದಾರರಿಗೆ ಮೃತ ವ್ಯಕ್ತಿಯ ಸಂರಕ್ಷಿಸಿ ಇಡಲಾದ ವೀರ್ಯಾಣುಗಳ ಮೇಲೆ ಯಾವುದೇ ಅಧಿಕಾರ ಇಲ್ಲ. ಮೃತ ವ್ಯಕ್ತಿ ಅರ್ಜಿದಾರನ ಮಗನಾಗಿದ್ದರೂ ಸಹ ಈ ಹಕ್ಕು ತಂದೆಗೆ ಸಿಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಮೃತ ಮಗನ ಪತ್ನಿ ಅನುಮತಿ ನೀಡಿದರೆ ಮಾತ್ರ ಈ ವೀರ್ಯಾಣುಗಳನ್ನ ತಂದೆ ಪಡೆಯಬಹುದು ಎಂದು ಕೋರ್ಟ್ ಹೇಳುವ ಮೂಲಕ ಈ ಅರ್ಜಿಯನ್ನ ತಿರಸ್ಕರಿಸಿದೆ.
ಥಲಸ್ಸೆಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯ ವೀರ್ಯಾಣುಗಳನ್ನ ಭವಿಷ್ಯತ್ತಿನಲ್ಲಿ ಬೇಕಾಗಬಹುದು ಎಂಬ ಕಾರಣಕ್ಕೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಆತನ ತಂದೆ ಸಂರಕ್ಷಿಸಿ ಇಟ್ಟಿದ್ದರು. ಆದರೆ ಮೃತ ವ್ಯಕ್ತಿ ಸಾಯುವ ಕೊನೆಯ ಕ್ಷಣದವರೆಗೂ ವೈವಾಹಿಕ ಜೀವನ ನಡೆಸುತ್ತಿದ್ದ ಕಾರಣ ಆಸ್ಪತ್ರೆ ಮೃತ ವ್ಯಕ್ತಿಯ ವೀರ್ಯವನ್ನ ಪಡೆಯಲು ಪತ್ನಿಯ ಅನುಮತಿ ಬೇಕು ಎಂದು ತಂದೆಗೆ ಸೂಚನೆ ನೀಡಿತ್ತು. ಈ ಸಂಬಂಧ ಮೃತ ವ್ಯಕ್ತಿಯ ತಂದೆ ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ತಂದೆಯೇ ಮಗನ ವೀರ್ಯಾಣುವನ್ನ ಸಂಗ್ರಹಿಸಿ ಇಟ್ಟಿದ್ದರೂ ಸಹ, ಮಗನ ಸಂತತಿಗೂ ತಂದೆಗೂ ಯಾವುದೇ ಸಂಬಂಧ ಇರೋದಿಲ್ಲ. ನಿಮ್ಮ ಪುತ್ರ ವೈವಾಹಿಕ ಜೀವನ ನಡೆಸುತ್ತಿದ್ದ ಕಾರಣ ಆತನ ನಿಧನದ ಬಳಿಕ ಈ ಸಂರಕ್ಷಿತ ವೀರ್ಯಾಣುಗಳ ಮೇಲೆ ಕೇವಲ ಆತನ ಪತ್ನಿಗೆ ಮಾತ್ರ ಅಧಿಕಾರವಿದೆ ಎನ್ನಲಾಗಿದೆ.