ಗೌಹಾಟಿ: ಕೋವಿಡ್ ಎಂಬ ಮಾರಿ ಮಾನವೀಯತೆಯನ್ನು ಮರೆಸಿ ಹಾಕಿದೆ. ವೈರಸ್‌ನಿಂದ ಆಗುವ ಅಥವಾ ಆಗುತ್ತಿರುವ ಪರಿಣಾಮಗಳ ಬಗ್ಗೆ ಅರಿವಿಲ್ಲದ ಜನ ಚಿತ್ರ ವಿಚಿತ್ರವಾಗಿ ಆಡುತ್ತಿದ್ದಾರೆ. ಕೊರೊನಾ ಬಂದು ಮೃತಪಟ್ಟವರ ಶವ ಸಂಸ್ಕಾರವನ್ನು ಸರಿಯಾಗಿ ಮಾಡುತ್ತಿಲ್ಲ. ಶವ ಸಂಸ್ಕಾರ ಮಾಡಿದವರನ್ನು ಹತ್ತಿರ ಸೇರಿಸುತ್ತಿಲ್ಲ. ಅಂಥ ಒಂದು ಅಮಾನವೀಯ ಘಟನೆಯ ವಿವರ ಇಲ್ಲಿದೆ.
ಈಶಾನ್ಯ ಭಾರತದ ರಾಜ್ಯ ಅಸ್ಸಾಂನಲ್ಲಿ ಕೊರೊನಾ ರೋಗದಿಂದ ಮೃತಪಟ್ಟವರ ಶವ ಸಂಸ್ಕಾರ ನೆರವೇರಿಸುತ್ತಿರುವ ರಮಾನಂದ ಸರ್ಕಾರ್ ಎಂಬ ವ್ಯಕ್ತಿಯ ಕರುಣಾಜನಕ ಕಥೆಯಿದು. ಇದುವರೆಗೆ ಕೊರೊನಾದಿಂದ ಮೃತರಾದ 450 ಕ್ಕೂ ಹೆಚ್ಚು ಶವಗಳನ್ನು ರಾಮಚಂದ್ರ ಸರ್ಕಾರ್ ಅಂತ್ಯಸಂಸ್ಕಾರ ಮಾಡಿದ್ದಾರೆ.
ಆದರೆ, ಆ ಕಾರ್ಯ ಮಾಡಿದ್ದಕ್ಕೆ ಅವರ ಮನೆಯ ಮಾಲೀಕ ಅವರನ್ನು ಹೊರ ಹಾಕಿದ್ದಾನೆ. ಸದ್ಯ ಹೋಟೆಲ್ ರೂಂ ಒಂದರಲ್ಲಿ ಉಳಿದು ಅವರು ಶವ ಸಂಸ್ಕಾರ ಕಾರ್ಯವನ್ನು ಮುಂದುವರಿಸಿದ್ದಾರೆ. ಅವರು ಸ್ವ ಗ್ರಾಮಕ್ಕೆ ಹೋಗದೇ ಎಷ್ಟೋ ತಿಂಗಳು ಕಳೆದಿದೆ. ಪತ್ನಿ ಮಕ್ಕಳನ್ನೂ ಭೇಟಿಯಾಗುತ್ತಿಲ್ಲ.
“ಜನ ನನ್ನನ್ನೇಕೆ ಬಹಿಷ್ಕಾರ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನಾನಲ್ಲದೇ ಈ ಕಾರ್ಯವನ್ನು ಇನ್ನಾರು ಮಾಡುತ್ತಾರೆ…..” ಎಂಬುದು ಸರ್ಕಾರ್ ಅವರ ಪ್ರಶ್ನೆ. ಸರ್ಕಾರ್ ಅವರು ಸುಡುಗಾಡಿನಲ್ಲಿ ಶವ ಸುಡುವ ಕೆಲಸವನ್ನು ಬಯಸಿ ಮಾಡುತ್ತಿರುವುದೇನಲ್ಲ. ಅವರಿಗೆ ತಮ್ಮ ಗ್ರಾಮದಲ್ಲಿ ತೀರಿಸಲಾಗದಷ್ಟು ಸಾಲವಿತ್ತು. ಕಬ್ಬಿನ ಹಾಲು ಮಾರಾಟ ಮಾಡಿ ಜೀವನ ನಡೆಸಿ, ಕುಟುಂಬ ಸಾಕಿ ಸಾಲ ತೀರಿಸಲು ಮುಂದಾದರು. ಆದರೆ, ಅವರ ದುಡಿಮೆ ಏನಕ್ಕೂ ಸಾಲುತ್ತಿರಲಿಲ್ಲ. ಇದರಿಂದ ಹೆಣ ಸುಡುವ ಕಾರ್ಯಕ್ಕೆ ಸೇರಿಕೊಂಡರು. ಮೊದಲು ಕೆಲ ದಿನ ತಮ್ಮ ಕೆಲಸದ ಬಗ್ಗೆ ಪತ್ನಿಗೂ ತಿಳಿಸಿರಲಿಲ್ಲ ಎನ್ನುತ್ತಾರೆ ಸರ್ಕಾರ್.
ಹೆಣ ಸುಡುವ ಕಾರ್ಯ ಮಾಡುತ್ತಿದ್ದರೂ ಕಳೆದ ಮಾರ್ಚ್‌ವರೆಗೂ ಸರ್ಕಾರ್ ಅವರ ಜೀವನದಲ್ಲಿ ಅಂಥ ಬದಲಾವಣೆ ಇರಲಿಲ್ಲ. ಮೇ ಮೊದಲ ವಾರದಲ್ಲಿ ಎಂದಿನಂತೆ ಒಬ್ಬ ಮಹಿಳೆಯ ಶವ ಅಂತ್ಯಸಂಸ್ಕಾರ ನೆರವೇರಿಸಿದರು. ಆಕೆಗೆ ಕೋವಿಡ್ ಇತ್ತು ಎಂಬುದು ಯಾವಾಗ ಗೊತ್ತಾಯಿತೋ ಜನರಲ್ಲಿ ಭಯ ಹುಟ್ಟಿತ್ತು. ಸರ್ಕಾರ್ ನನ್ನು ತಿರಸ್ಕಾರದಿಂದ ನೋಡಲು ಆರಂಭಿಸಿದ್ದರು. ರಾಜ್ಯ ಆಡಳಿತ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಿತು. ಆದರೆ, ನಂತರ ಅವರ ಕೆಲಸಕ್ಕೆ ಬೇರ‍್ಯಾರೂ ಸಿಕ್ಕಿಲ್ಲ. ಇದರಿಂದ ಸ್ಥಳೀಯ ಆಡಳಿತ ಕೋವಿಡ್ 19 ನಿಂದ ಮೃತರಾದವರ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಸ್ಥಳ ಗುರುತಿಸಿ ಅಲ್ಲಿಗೆ ರಮಾನಂದ ಸರ್ಕಾರ್ ಅವರನ್ನು ನೇಮಿಸಿದೆ.