ಮಹಾರಾಷ್ಟ್ರದಲ್ಲಿ ಕೊರೊನಾ ಅಲೆ ಮತ್ತೊಮ್ಮೆ ಆತಂಕವನ್ನ ಹುಟ್ಟುಹಾಕುವಂತೆ ಮಾಡಿದೆ. ಆದರೆ ಮಹಾರಾಷ್ಟ್ರದ ಜನತೆ ಮಾತ್ರ ಈ ಕೊರೊನಾದ ಅಲೆಯನ್ನ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಮುಂಬೈನಲ್ಲಿ ಕೊರೊನಾದ 2ನೆ ಅಲೆ ಶುರುವಾಗಿದೆ. ಮಹಾರಾಷ್ಟ್ರ ಸರ್ಕಾರ ಈಗಾಗಲೇ ಸೋಂಕು ತಡೆಗೆ ಸಾಕಷ್ಟು ಮಾರ್ಗಸೂಚಿಗಳನ್ನ ಹೊರಡಿಸಿದೆ. ಇವೆಲ್ಲದರ ನಡುವೆಯೂ ಶುಕ್ರವಾರ ಅತೀ ಹೆಚ್ಚು ಅಂದರೆ 24 ಗಂಟೆಗಳಲ್ಲಿ ಬರೋಬ್ಬರಿ 3063 ಕೇಸ್ಗಳು ವರದಿಯಾಗಿವೆ.
ಕೊರೊನಾ ಮಾರ್ಗಸೂಚಿಗಳನ್ನ ಇನ್ನಷ್ಟು ಬಿಗಿ ಮಾಡಲಾಗಿದೆ ಇದರ ಜೊತೆಯಲ್ಲಿ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಭೀತಿ ಕೂಡ ಎದುರಾಗಿದೆ. ಇಷ್ಟಾದರೂ ಸಹ ಮುಂಬೈ ಜನರ ನಿರ್ಲಕ್ಷ್ಯ ಭಯ ಹುಟ್ಟಿಸುವಂತಿದೆ. ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಪೊಲೀಸರನ್ನ ಕಂಡಲ್ಲಿ ಮಾತ್ರ ಮಾಸ್ಕ್ ಧರಿಸುವ ಜನರು ಮುಂಬೈನಲ್ಲಿದ್ದಾರೆ.
ನಾನ್ಯಾಕೆ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಬೇಕು ಎಂಬಂತೆ ಜನರು ರಾಜಾರೋಷವಾಗಿ ಮಾಸ್ಕ್ಗಳಿಲ್ಲದೇ ಓಡಾಡುತ್ತಿದ್ದಾರೆ ಎಂದು ಪಾರಲ್ ನಿವಾಸಿ 33 ವರ್ಷದ ಪೌಲಮಿ ಮುಖ್ಯೋಪಾಧ್ಯಾಯ ಹೇಳಿದ್ದಾರೆ.
ಕೊರೊನಾ ಲಸಿಕೆಯಿಂದಾಗಿ ಜನರಿಗೆ ಹೆಚ್ಚಿನ ಶಕ್ತಿ ಬಂದಂತೆ ಆಗಿರೋದು ನಿಜ. ಕಳೆದ ವರ್ಷ ಯಾರಿಗೂ ವೈರಸ್ನ ಬಗ್ಗೆ ಹೆಚ್ಚಿನ ಜ್ಞಾನವಿರಲಿಲ್ಲ. ಹೀಗಾಗಿ ಜನರು ತುಂಬಾನೇ ಭಯಗೊಂಡಿದ್ದರು. ಆದರೆ ಈಗ ಜನರು ಕೊರೊನಾ ಬಗ್ಗೆ ತಿಳಿದುಕೊಂಡಿದ್ದಾರೆ. ಲಸಿಕೆ ತೆಗೆದುಕೊಳ್ತಿದ್ದಾರೆ. ಸೋಂಕಿನ ಪ್ರಮಾಣಕ್ಕೆ ಹೋಲಿಸಿದ್ರೆ ಮರಣದ ಪ್ರಮಾಣ ತುಂಬಾನೇ ಕಡಿಮೆ ಇದೆ ಅನ್ನೋದು ಜನರಿಗೆ ತಿಳಿದಿದೆ. ಇದೇ ಕಾರಣಕ್ಕೆ ಜನರು ಕೊರೊನಾ ವೈರಸ್ನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಮನೋವೈದ್ಯೆ ನತಾಶಾ ಮೆಹ್ತಾ ಹೇಳಿದ್ದಾರೆ.