ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕು ಪಡೆದಿದೆ. ಲಕ್ಷಾಂತರ ಮಂದಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಎರಡನೇ ಡೋಸ್ ಕೂಡ ಹಾಕಲಾಗ್ತಿದೆ. ಆದ್ರೆ ಕೊರೊನಾ ಲಸಿಕೆ ಹಾಕಿದ ನಂತ್ರವೂ ಕೆಲವರಿಗೆ ಕೊರೊನಾ ಕಾಣಿಸಿಕೊಂಡಿದೆ. ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಆರ್.ಕೆ. ಧೀಮನ್ ಮತ್ತು ಪತ್ನಿ ಕೊರೊನಾ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಂಡಿದ್ದಾರೆ. ಆದ್ರೂ ಅವರಿಗೆ ಕೊರೊನಾ ಕಾಣಿಸಿಕೊಂಡಿದೆ. ಲಸಿಕೆ ನಂತ್ರವೂ ಕೊರೊನಾ ಏಕೆ ಕಾಣಿಸಿಕೊಳ್ಳುತ್ತೆ ಹಾಗೂ ಕೊರೊನಾ ಲಸಿಕೆಯಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ಧೀಮನ್ ಹೇಳಿದ್ದಾರೆ.
ಕೊರೊನಾ ಲಸಿಕೆ ಹಾಕುವುದ್ರಿಂದ ಕೊರೊನಾ ಅಪಾಯ ಕಡಿಮೆ. ಆಸ್ಪತ್ರೆಗೆ ದಾಖಲಾಗುವುದು ಅಥವಾ ಸಾವಿನಿಂದ ರಕ್ಷಣೆ ಪಡೆಯಲು ಕೊರೊನಾ ಲಸಿಕೆ ಅಗತ್ಯವೆಂದು ಧೀಮನ್ ಹೇಳಿದ್ದಾರೆ. ಮತ್ತೆ ಸೋಂಕಿಗೊಳಗಾಗುವುದನ್ನು ಇದು ತಪ್ಪಿಸುತ್ತದೆ ಎಂದವರು ಹೇಳಿದ್ದಾರೆ. ಲಸಿಕೆ ನಂತ್ರ ಕೊರೊನಾ ಲಕ್ಷಣಗಳು ಸೌಮ್ಯವಾಗಿರುತ್ತವೆ.
ಧೀಮನ್ ಮಾತ್ರವಲ್ಲ ಅಮೆರಿಕಾದಲ್ಲಿಯೂ ಅನೇಕರು ಕೊರೊನಾ ಲಸಿಕೆ ನಂತ್ರ ಸೋಂಕಿಗೊಳಗಾಗಿದ್ದಾರೆ. ಕೊರೊನಾ ಸೋಂಕು ಲಸಿಕೆ ನಂತ್ರವೂ ಪಾಸಿಟಿವ್ ಬರಲು ಕಾರಣವೇನು ಎಂಬುದನ್ನೂ ಕೆಲ ತಜ್ಞರು ಹೇಳಿದ್ದಾರೆ. ನಿರ್ಲಕ್ಷ್ಯ ಇದಕ್ಕೆ ಒಂದು ಕಾರಣವಾಗಿದೆ. ಲಸಿಕೆಯನ್ನು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದೆ, ಸರಿಯಾದ ನಿರ್ವಹಣೆ ಮಾಡದೆ ಹೋದಲ್ಲಿ ಲಸಿಕೆ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಮ್ಯಾಸಚೂಸೆಟ್ಸ್ ನಲ್ಲಿರುವ ಸಿವಿಎಸ್ ಔಷಧಾಲಯವು ಫೆಬ್ರವರಿಯಲ್ಲಿ ಸಾರ್ವಜನಿಕ ಕ್ಷಮೆ ಯಾಚಿಸಿತ್ತು. ಕೆಲವು ರೋಗಿಗಳಿಗೆ ಅಜಾಗರೂಕತೆಯಿಂದ ಪೂರ್ಣ ಪ್ರಮಾಣದ ಲಸಿಕೆ ನೀಡದೆ ಭಾಗಶಃ ನೀಡಿರುವುದಾಗಿ ಹೇಳಿತ್ತು.
ಕೊರೊನಾ ಬರಲು ಇನ್ನೊಂದು ಕಾರಣ ದುರ್ಬಲ ರೋಗನಿರೋಧಕ ಶಕ್ತಿ. ದುರ್ಬಲ ರೋಗನಿರೋಧಕಕ್ಕೆ ದೀರ್ಘಕಾಲದಿಂದ ಔಷಧಿ ಬಳಕೆ, ವೈದ್ಯಕೀಯ ಚಿಕಿತ್ಸೆ ಅಥವಾ ಆನುವಂಶಿಕ ವ್ಯತ್ಯಾಸಗಳಿಂದಾಗಿರಬಹುದು. ವಯಸ್ಸು ಸಹ ರೋಗನಿರೋಧಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ.
ಇಷ್ಟೇ ಅಲ್ಲ ಇದಕ್ಕಾಗಿಯೇ ಎಫೆಕ್ಸಿ ಡೇಟಾವನ್ನು ಅಧ್ಯಯನ ಮಾಡಬಹುದು. ಇದು ಲಸಿಕೆ ಶೇಕಡಾವಾರು ಸುರಕ್ಷಿತವಾಗಿದೆ ಎಂಬುದನ್ನು ಸೂಚಿಸುತ್ತದೆ. ಯಾವುದೇ ಲಸಿಕೆ ತಯಾರಕರು ಶೇಕಡಾ 100ರಷ್ಟು ಲಸಿಕೆ ಸುರಕ್ಷಿತವಾಗಿದೆ ಎಂಬ ಭರವಸೆ ನೀಡುವುದಿಲ್ಲ. ಯಾವುದೇ ಲಸಿಕೆಯನ್ನು ಹಾಕಿದ ನಂತ್ರ ಆ ರೋಗ ಮತ್ತೆ ಬರುವುದೇ ಇಲ್ಲ ಎಂದಲ್ಲ. ಬರುವ ಸಾಧ್ಯತೆಯಿರುತ್ತದೆ. ಆದ್ರೆ ಅದ್ರ ಲಕ್ಷಣ ಸೌಮ್ಯವಾಗಿರುತ್ತದೆ.
ಕೊರೊನಾ ಲಸಿಕೆ ಹಾಕಿದ ನಂತ್ರವೂ ಕೊರೊನಾ ಬರುತ್ತೆ ಎಂದಾದ್ರೆ ಯಾಕೆ ಕೊರೊನಾ ಲಸಿಕೆ ಹಾಕಬೇಕು ಎಂಬ ಪ್ರಶ್ನೆ ಏಳುತ್ತದೆ. ಸಾಮಾನ್ಯವಾಗಿ ಸುರಕ್ಷಾ ಕವಚ ಹಾಕಿ ಯುದ್ಧಕಿಳಿಯುವುದಕ್ಕೂ ಸುರಕ್ಷಾ ಕವಚವಿಲ್ಲದೆ ಯುದ್ಧಕ್ಕಿಳಿಯುವುದಕ್ಕೂ ವ್ಯತ್ಯಾಸವಿದೆ. ಕೊರೊನಾ ಲಸಿಕೆ ಹಾಕುವುದೆಂದ್ರೆ ಸುರಕ್ಷಾ ಕವಚ ಹಾಕಿ ಯುದ್ಧಕ್ಕಿಳಿದಂತೆ.
ಕೊರೊನಾ ಲಸಿಕೆ ಎಷ್ಟು ದಿನ ನಮ್ಮನ್ನು ರಕ್ಷಿಸಲಿದೆ ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ವರ್ಷಾನುಗಟ್ಟಲೆ ನಮ್ಮನ್ನು ಲಸಿಕೆ ರಕ್ಷಿಸುತ್ತದೆ. ಆದ್ರೆ ಈ ಬಗ್ಗೆ ಮತ್ತಷ್ಟು ಅಧ್ಯಯನ ನಡೆಯುತ್ತಿದೆ.