ನವದೆಹಲಿ: ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದ ಜನರು ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂಕಷ್ಟದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಣೆಯಾಗಿದ್ದಾರೆ ಎಂದು ಎನ್ಎಸ್ಯುಐ ದೆಹಲಿಯ ಪೊಲೀಸ್ ಠಾಣೆಗೆ ದೂರು ನೀಡಿದೆ.
ಮಾರಣಾಂತಿಕ ಕೊರೊನಾ ವೈರಸ್ ನಿಂದ ದೇಶದಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ. ದೇಶಕ್ಕೆ ಇಂತಹ ಸಂಕಷ್ಟದ ಸಂದರ್ಭ ಎದುರಾಗಿದ್ದರೂ ಕೂಡ ಗೃಹ ಸಚಿವ ಅಮಿತ್ ಶಾ ಒಂದೇ ಒಂದು ಪ್ರತಿಕ್ರಿಯೆಗಳನ್ನು ನೀಡುತ್ತಿಲ್ಲ. ಟ್ವಿಟರ್ ನಲ್ಲಿಯೂ ಯಾವುದೇ ಹೇಳಿಕೆ ನೀಡುತ್ತಿಲ್ಲ. ಕೇಂದ್ರ ಗೃಹ ಸಚಿವರು ನಾಪತ್ತೆಯಾಗಿದ್ದಾರೆ. ದಯವಿಟ್ಟು ಅವರನ್ನು ಹುಡುಕಿಕೊಡಬೇಕು ಎಂದು ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ ದೂರು ದಾಖಲಿಸಿದ್ದಾರೆ.
ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ದೇಶದಲ್ಲಿ ಇಂತಹ ಆರೋಗ್ಯ ಬಿಕ್ಕಟ್ಟು ಎದುರಾಗಲು ಇಂತಹ ಸಚಿವರುಗಳೇ ಕಾರಣ. ಜನರ ಸಂಕಷ್ಟದ ಸ್ಥಿತಿಯಲ್ಲಿ ಸಚಿವರಾದವರು, ರಾಜಕಾರಣಿಗಳು ಜವಾಬ್ದಾರಿಯಿಂದ ಜನಸೇವೆ, ರಾಷ್ಟ್ರ ಸೇವೆ ಮಾಡುವುದನ್ನು ಬಿಟ್ಟು ಓಡಿ ಹೋಗುತ್ತಿದ್ದಾರೆ. ಇಂದು ಅಮಿತ್ ಶಾ ಅವರು ನಾಪತ್ತೆಯಾಗಿದ್ದಾರೆ. ಹಾಗಾಗಿ ಶಾ ಅವರನ್ನು ಹುಡುಕಿಕೊಡಬೇಕು. ಅಮಿತ್ ಶಾ ಅವರು ನಿಜಕ್ಕೂ ಈ ದೇಶದ ಗೃಹ ಸಚಿವರೋ ಅಥವಾ ಪಕ್ಷದ ಗೃಹ ಸಚಿವರೋ ಎಂಬುದನ್ನು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.