ದೇಶದಲ್ಲಿ ಕೊರೋನಾ ಎರಡನೆಯ ಅಲೆ ಅಬ್ಬರ ಕಡಿಮೆಯಾಗತೊಡಗಿದೆ. ಈಗ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಜನರಿಗೆ ಲಸಿಕೆ ವೇಗವಾಗಿ ನೀಡುವ ಮೂಲಕ ವೈರಸ್ ವಿರುದ್ಧ ರಕ್ಷಣೆ ನೀಡಲು ಕ್ರಮಕೈಗೊಳ್ಳಲಾಗಿದೆ. ಲಸಿಕೆಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಲಸಿಕೆ ಉತ್ಪಾದಿಸಿ ಅದನ್ನು ಬಳಸಿಕೊಂಡು ಎಲ್ಲರಿಗೂ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಇದೇ ವೇಳೆ ಮೂಗಿನಿಂದ ಪಡೆಯುವ ಲಸಿಕೆಯ ಸಂಶೋಧನೆ ನಡೆಯುತ್ತಿದೆ. ಇದು ಯಶಸ್ವಿಯಾದಲ್ಲಿ ಭಾರತದ ವ್ಯಾಕ್ಸಿನೇಷನ್ ಡ್ರೈವ್ ವೇಗವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಕೋವಿಡ್ ತಡೆಗೆ ಮೂಗಿನ ಮೂಲಕ ಹಾಕುವ ನೇಸಲ್ ವ್ಯಾಕ್ಸಿನ್ ಸಂಶೋಧನೆ ನಡೆದಿದ್ದು, ಯಶಸ್ವಿಯಾದರೆ. ಲಸಿಕೆ ಅಭಿಯಾನಕ್ಕೆ ವೇಗ ಸಿಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏನಿದು ನೇಸಲ್ ವ್ಯಾಕ್ಸಿನ್…?
ಸೂಜಿಯಿಂದ ತೋಳಿನ ಮೂಲಕ ಕೊರೊನಾ ಲಸಿಕೆ ನೀಡುವ ಬದಲು ಮೂಗಿನ ಮೂಲಕ ಲಸಿಕೆಯನ್ನು ನೀಡಲಾಗುತ್ತದೆ. ಮೂಗಿನಲ್ಲಿ ಸ್ಪ್ರೇ ಮೂಲಕ ಡೋಸೇಜ್ ನೇರವಾಗಿ ಉಸಿರಾಟ ಮಾರ್ಗಕ್ಕೆ ತಲುಪಿಸುವುದು ಇದರ ಗುರಿಯಾಗಿದೆ.
ಕಳೆದ ವರ್ಷ ವಿಜ್ಞಾನಿಗಳು ಕೋವಿಡ್-19 ವಿರುದ್ಧ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಮೂಗಿನ ಮೂಲಕವೂ ನೀಡಬಹುದು. ಕೊರೊನಾ ಸೋಂಕಿಗೆ ಒಳಗಾದ ಇಲಿಗಳಲ್ಲಿ ಸೋಂಕು ತಡೆಗಟ್ಟುವಲ್ಲಿ ಇದು ಪರಿಣಾಮಕಾರಿಯಾಗಿದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ.
ಸಾಂಕ್ರಾಮಿಕ ರೋಗ ನಿಗ್ರಹಿಸುವ ರಕ್ಷಣಾತ್ಮಕ ಔಷಧ ಇದಾಗಿದೆ. ಸೆಲ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ, ಮೂಗಿನ ಮೂಲಕ ನೀಡುವ ಲಸಿಕೆ ಆರಂಭಿಕ ತಾಣವನ್ನು ಗುರಿಯಾಗಿಸಿಕೊಂಡು ಪರಿಣಾಮ ಉಂಟು ಮಾಡುತ್ತದೆ. ಹೆಚ್ಚು ರೋಗನಿರೋಧಕ ಪ್ರತಿಕ್ರಿಯೆಯನ್ನು ಕೂಡ ಇದು ಉಂಟುಮಾಡಲಿದೆ ಎಂದು ಹೇಳಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು, ಮೂಗಿನ ಲಸಿಕೆಗಳನ್ನು ತಯಾರಿಸುವ ಪ್ರಯೋಗಗಳು ಭಾರತದಲ್ಲಿ ನಡೆಯುತ್ತಿದ್ದು, ಇದು ಮಕ್ಕಳ ರಕ್ಷಣೆಯಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ಹೇಳಿದ್ದರು.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಇಂಟ್ರಾನೇಸಲ್ ಲಸಿಕೆ ಬಿಬಿವಿ 154 ಈಗಾಗಲೇ ಪೂರ್ವ-ಪ್ರಾಯೋಗಿಕ ಪ್ರಯೋಗ ಹಂತದಲ್ಲಿದೆ.
ಮೂಗಿನ ಲಸಿಕೆಯ ಪ್ರಯೋಜನಗಳು
ಮೂಗಿನ ಮೂಲಕ ನೀಡಲಾಗುವ ಲಸಿಕೆಯ ಪ್ರಯೋಜನಗಳ ಕುರಿತು ಅಧ್ಯಯನ ನಡೆದಿದೆ. ಆಕ್ರಮಣಶೀಲವಲ್ಲದ ಲಸಿಕೆ ಇದಾಗಿದೆ. ಇದನ್ನು ತೆಗೆದುಕೊಳ್ಳಲು ಯಾವುದೇ ಸೂಜಿ ಅಗತ್ಯವಿರುವುದಿಲ್ಲ. ಆರೋಗ್ಯ ಕಾರ್ಯಕರ್ತರು ಕೂಡ ಬೇಕಿಲ್ಲ. ಲಸಿಕೆಯನ್ನು ತೆಗೆದುಕೊಳ್ಳಲು ಸೂಜಿ ಬಳಕೆ ಇರಲ್ಲ. ಇದನ್ನು ನಿರ್ವಹಿಸಲು ಆರೋಗ್ಯ ಕಾರ್ಯಕರ್ತರ ಅಗತ್ಯವೂ ಇಲ್ಲ ಎಂದು ಹೇಳಲಾಗಿದೆ.
ವಾಷಿಂಗ್ಟನ್ ಸ್ಕೂಲ್ ಆಫ್ ಮೆಡಿಸನ್ ಅಧ್ಯಯನದ ಪ್ರಕಾರ, ಇಂಟ್ರಾನೇಸಲ್ ಲಸಿಕೆ ಲೈವ್ ಅಟೆನ್ಯುವೇಟೆಡ್ ಲಸಿಕೆಯಾಗಿದೆ.
ಮೂಗಿನ ಲಸಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ…?
ಇಮ್ಮುನೈಸೇಶನ್ ಕುರಿತ ಐಎಪಿ ಸಮಿತಿಯ ಮಾಜಿ ಕನ್ವೀನರ್ ಮತ್ತು ಶಿಶುವೈದ್ಯ ಡಾ. ಡಾ. ವಿಪಿನ್ ಎಂ. ವಸಿಷ್ಠ ಅವರು, ಬುಸಿನೆಸ್ ಇನ್ಸೈಡರ್ ಗೆ ನೀಡಿದ ಮಾಹಿತಿಯಂತೆ, ಇಂಟ್ರಾನೇಸಲ್ ಲಸಿಕೆಗಳ ಗಮನಾರ್ಹ ಪ್ರಯೋಜನವೆಂದರೆ ಅದು ಪ್ರವೇಶದ ಸ್ಥಳದಲ್ಲಿ ಮೂಗಿನಲ್ಲಿ ದೃಢವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ. ವೈರಸ್ ಹರಡುವಿಕೆ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ. ಹೀಗೆ ವೈರಸ್ ಪ್ರವೇಶಿಸುವುದನ್ನು ತಡೆಯಲು ಸಾಧ್ಯವಾದರೆ ಅದು ಶ್ವಾಸಕೋಶಕ್ಕೆ ಪ್ರವೇಶಿಸಿ ಹಾನಿಯನ್ನುಂಟು ಮಾಡಲು ಸಾಧ್ಯವಾಗುವುದಿಲ್ಲ. ಪರಿಣಾಮಕಾರಿಯಾದ ಮ್ಯೂಕೋಸಲ್ ರೋಗನಿರೋಧಕ ಪ್ರತಿಕ್ರಿಯೆಯು ಉತ್ಪತ್ತಿಯಾಗಿದ್ದರೆ, ಅದು ಕೊರೋನಾ ವೈರಸ್ ಅನ್ನು ತಡೆಯುತ್ತದೆ. ಮತ್ತು ಇನ್ ಫೆಕ್ಷನ್ ಆಗದಂತೆ ರಕ್ಷಿಸುತ್ತದೆ.
ಭಾರತ್ ಬಯೋಟೆಕ್ ನ ಮೂಗಿನ ಲಸಿಕೆ
ಭಾರತ್ ಬಯೋಟೆಕ್ ನ ಮೂಗಿನ ಲಸಿಕೆಯ ಮೊದಲ ಹಂತದ ಪ್ರಯೋಗ ನಡೆದಿದೆ. ತಯಾರಕರ ಪ್ರಕಾರ ಮತ್ತು ವರದಿಗಳ ಪ್ರಕಾರ, ಇಂಟ್ರಾನೇಸಲ್ ಲಸಿಕೆ ಬಿಬಿವಿ 154 ಸೋಂಕಿನ ಸ್ಥಳದಲ್ಲಿ (ಮೂಗಿನ ಲೋಳೆಪೊರೆಯಲ್ಲಿ) ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ. ಕೋವಿಡ್ -19 ರ ಸೋಂಕು ಮತ್ತು ಪ್ರಸರಣ ಎರಡನ್ನೂ ತಡೆಯಲು ಇದು ಸಹಾಯ ಮಾಡುತ್ತದೆ.
ಕೋವಾಕ್ಸಿನ್ ಲಸಿಕೆ ತಯಾರಿಸಿರುವ ಭಾರತ್ ಬಯೋಟೆಕ್ ಮೂಗಿನ ಲಸಿಕೆಯನ್ನು ತಯಾರಿಸುತ್ತಿದ್ದು, ವರ್ಷಾಂತ್ಯಕ್ಕೆ 10 ಕೋಟಿ ಲಸಿಕೆ ತಯಾರಿಸಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.
ಈಗ ಇರುವ ಕೊರೊನಾ ವ್ಯಾಕ್ಸಿನೇಷನ್‌ನಿಂದ ಇದು ಹೇಗೆ ಭಿನ್ನವಾಗಿದೆ…?
ಅಧ್ಯಯನಗಳ ಪ್ರಕಾರ, COVID-19 ಶಾಟ್ ಮತ್ತು ಮೂಗಿನ ಸ್ಟ್ಪ್ರೇ ಮೂಲಕ ಕೆಲಸ ಮಾಡುತ್ತದೆ. ಮೂಗಿನ ಲಸಿಕೆ ನೀಡುವುದರಲ್ಲಿ ಸಾಮಾನ್ಯವಾಗಿ ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ. ಆದರೆ ವಯಸ್ಕರಿಗೆ ಸಹ ಮೂಗಿನಲ್ಲಿ ಸಿಂಪಡಿಸುವ ಲಸಿಕೆಯು ಫ್ಲೂ ಶಾಟ್‌ನಂತೆಯೇ ಕಾರ್ಯನಿರ್ವಹಿಸುತ್ತದೆ ಎಂದು ವೈದ್ಯರು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.