ಕೊರೊನಾ ವೈರಸ್ ಶ್ವಾಸಕೋಶದ ಮೇಲೆ ಮಾತ್ರವಲ್ಲ ಮೆದುಳಿನ ಮೇಲೂ ಪ್ರಭಾವ ಬೀರಿದೆ. ಅನೇಕ ಸಂಶೋಧನೆಗಳಲ್ಲಿ ಇದು ಪತ್ತೆಯಾಗಿದೆ. ಇದೇ ಕಾರಣಕ್ಕೆ ಕೊರೊನಾ ರೋಗಿಗಳಿಗೆ ನರವೈಜ್ಞಾನಿಕ ತೊಂದರೆಗಳ ಬಗ್ಗೆಯೂ ವೈದ್ಯರು ಗಮನ ನೀಡ್ತಿದ್ದಾರೆ. ಹಾಗೆ ಹೆಚ್ಚಿನ ಪರೀಕ್ಷೆ ಅಗತ್ಯವಿದೆಯೇ ಎಂಬ ಬಗ್ಗೆ ವೈದ್ಯರು ನಿರ್ಧಾರ ತೆಗೆದುಕೊಳ್ತಿದ್ದಾರೆ. ಕೆಲ ರೋಗಿಗಳಿಗೆ ಎಂಆರ್ಐ ಸ್ಕ್ಯಾನ್ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದ್ರೆ ವೈದ್ಯರ ಸಲಹೆ ಇಲ್ಲದೆ ಎಂಆರ್ಐ ಸ್ಕ್ಯಾನ್ ಮಾಡುವುದು ಒಳ್ಳೆಯದಲ್ಲ.
ಎಂಆರ್ಐ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ಸ್ಕ್ಯಾನ್. ಒಂದು ಭಾಗವನ್ನು 15 ರಿಂದ 90 ನಿಮಿಷದೊಳಗೆ ಸ್ಕ್ಯಾನ್ ಮಾಡಲಾಗುತ್ತದೆ. ಇದು ಎಕ್ಸ್ ರೇ ಹಾಗೂ ಸಿಟಿ ಸ್ಕ್ಯಾನ್ ಗಿಂತ ಭಿನ್ನವಾಗಿರುತ್ತದೆ. ರೇಡಿಯೇಷನ್ ಜೊತೆ ಮ್ಯಾಗ್ನೆಟಿಕ್ ರೂಪದಲ್ಲಿ ಕೆಲಸ ಮಾಡುತ್ತದೆ. ದೇಹದ ಯಾವುದೇ ಭಾಗದಲ್ಲಿ ಸಣ್ಣ ಸಮಸ್ಯೆಯಿದ್ದರೂ ಇದ್ರಿಂದ ಪತ್ತೆ ಮಾಡಬಹುದು. ಎಂಆರ್ಐ ಮಷಿನ್ ಒಳಗೆ ರೋಗಿಯನ್ನು ಕಳುಹಿಸುವ ಮೊದಲು ಲೋಹದ ವಸ್ತುಗಳಾದ ಗಡಿಯಾರ, ವಿಗ್, ಆಭರಣ, ಪಿನ್ ಸೇರಿದಂತೆ ಎಲ್ಲ ವಸ್ತುಗಳನ್ನು ತೆಗೆಯಲು ಸಲಹೆ ನೀಡಲಾಗುತ್ತದೆ.
ಕೊರೊನಾ ವೈರಸ್ ಮೆದುಳಿನ ಮೇಲೆ ಹೇಗೆ ಪ್ರಭಾವ ಬೀರ್ತಿದೆ ಎಂಬುದನ್ನು ಈಗ್ಲೂ ತಜ್ಞರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದ್ರೆ ಅನೇಕ ರೋಗಿಗಳಿಗೆ ಮೆದುಳಿನ ಸಮಸ್ಯೆ ಎದುರಾಗಿದೆ. ಕೊರೊನಾ ರೋಗಿಗಳಲ್ಲಿ ಶೇಕಡಾ 50ರಷ್ಟು ಮಂದಿಗೆ ಸಮಸ್ಯೆ ಕಾಣಿಸಿಕೊಂಡಿದೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಅನೇಕ ದಿನಗಳವರೆಗೆ ವಾಸನೆ ಬರದೆ ಹೋದಲ್ಲಿ ಅಥವಾ ತಲೆ ನೋವು ನಿರಂತರವಾಗಿ ಕಾಡ್ತಿದ್ದರೆ ಹಾಗೂ ನಿದ್ರೆ ಸರಿಯಾಗಿ ಬರದೆ ಹೋದಲ್ಲಿ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸಲಹೆಯಿಲ್ಲದೆ ಎಂಆರ್ಐ ಸ್ಕ್ಯಾನ್ ಮಾಡಿಸಲೇಬೇಡಿ.