ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹದಿಹರೆಯದ ಹುಡುಗಿಯ ಖಾಸಗಿ ಅಂಗ ಸ್ಪರ್ಶಿಸಿದ ಕಿಡಿಗೇಡಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಅಮಿಯಾ ದಾಸ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ರಂಗಭೂಮಿ ನಟಿಯಾಗಿರುವ 19 ವರ್ಷದ ಯುವತಿ ಅಭ್ಯಾಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಆರೋಪಿ ಅನುಚಿತವಾಗಿ ವರ್ತಿಸಿದ್ದಾನೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣದಲ್ಲಿ ಘಟನೆ ನಡೆದಿದೆ. ರಂಗಭೂಮಿ ನಟಿ ನಾಟಕ ಅಭ್ಯಾಸ ಮುಗಿದ ನಂತರ ಕಾಳಿಬರಿಯಲ್ಲಿರುವ ತನ್ನ ಮನೆಗೆ ರಾತ್ರಿ 9.45 ರ ಸುಮಾರಿಗೆ ಹೊರಟಿದ್ದಾಳೆ.
ಅಶೋಕೆನಗರದ ಚೌರಿಂಗಿಯಲ್ಲಿ ಆಕೆಗೆ ಎದುರಾದ ಅಮಿಯಾ ದಾಸ್ ಅಶ್ಲೀಲವಾಗಿ ಸನ್ನೆ ಮಾಡಿದ್ದಾನೆ. ಯುವತಿ ತಿರುಗಿ ನೋಡದೆ ಮುಂದೆ ಹೆಜ್ಜೆ ಹಾಕಿದ್ದಾಳೆ. ಹಿಂದಿನಿಂದ ಬಂದ ಆರೋಪಿ ಆಕೆಯ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಕೈಹಿಡಿದು ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೆ, ಆಕೆಯ ಬಳಿಯಿದ್ದ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸಿದ್ದು ಪ್ರತಿರೋಧ ತೋರಿದಾಗ ಅಲ್ಲಿಂದ ಪರಾರಿಯಾಗಿದ್ದಾನೆ.
ಮೊದಲಿಗೆ ಆಘಾತಕ್ಕೆ ಒಳಗಾದ ಯುವತಿ ಬಳಿಕ ಆತನನ್ನು ಬೆನ್ನಟ್ಟಿ ಹಿಡಿದಿದ್ದಾಳೆ. ಅಲ್ಲಿದ್ದ ಸ್ಥಳೀಯರು ಕೂಡ ಆಕೆಯ ನೆರವಿಗೆ ಧಾವಿಸಿದ್ದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.