ಕೊಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ ದಿನಾಜ್ ಪುರ ಹೆಮ್ಟಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ದೇವೇಂದ್ರನಾಥ್ ರಾಯ್(60) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ನಿಗೂಢ ಸಾವಿನ ಕುರಿತು ಅನುಮಾನ ವ್ಯಕ್ತವಾಗಿದೆ.
ದೇವೇಂದ್ರನಾಥ್ ಅವರ ಕೊಲೆ ಶಂಕೆ ವ್ಯಕ್ತವಾಗಿದ್ದು ಸಿಬಿಐ ತನಿಖೆಗೆ ಕುಟುಂಬದವರು ಆಗ್ರಹಿಸಿದ್ದಾರೆ. ಅವರ ನಿವಾಸದಿಂದ 1 ಕಿಲೋ ಮೀಟರ್ ದೂರದ ಬಿಂದಾಲ್ ಗ್ರಾಮದ ಅಂಗಡಿಯೊಂದರ ಜಗಲಿಯಲ್ಲಿ ಶಾಸಕರ ಮೃತದೇಹ ಕಂಡು ಬಂದಿದ್ದು, ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವಿನ ಜಗಳದ ನಡುವೆ ಶಾಸಕರ ಅನುಮಾನಾಸ್ಪದ ಸಾವು ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
ಭಾನುವಾರ ಮಧ್ಯರಾತ್ರಿ ಕೆಲವರು ಮನೆಗೆ ಬಂದು ಶಾಸಕ ದೇವೇಂದ್ರನಾಥ್ ಅವರನ್ನು ಕರೆದುಕೊಂಡು ಹೋಗಿರುವುದಾಗಿ ಕುಟುಂಬದವರು ಹೇಳಿದ್ದಾರೆ. ಅವರ ಜೇಬಿನಲ್ಲಿ ಡೆತ್ನೋಟ್ ದೊರೆತಿದ್ದು ಅದರಲ್ಲಿ ಹಂತಕರ ಸುಳಿವು ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊದಲು ಸಿಪಿಎಂ ಶಾಸಕರಾಗಿದ್ದ ಅವರು ನಂತರದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಶಾಸಕರಾಗಿ ಚುನಾಯಿತರಾಗಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನಮ್ಮ ಪಕ್ಷದ ಶಾಸಕ ದೇವೇಂದ್ರನಾಥ್ ಕೊಲೆಯಾಗಿರುವ ಶಂಕೆಯಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಉತ್ತರ ದಿನಾಜ್ ಪುರ ಬಂದ್’ಗೆ ಬಿಜೆಪಿ ಕರೆ ನೀಡಿದೆ.