“ಏನಪ್ಪಾ ಹೀಗೆಲ್ಲಾ ಇದ್ಯಾ?” ಅನಿಸೋ ಥರದ ಸೂಚನೆಯೊಂದನ್ನು ಕೊಟ್ಟಿರುವ ಉತ್ತರ ಪ್ರದೇಶ ಅರಣ್ಯ ಇಲಾಖೆ ಅಧಿಕಾರಿಗಳು, ಇಲ್ಲಿನ ಬಿಜ್ನೋರ್ ಹಾಗೂ ಸುತ್ತಲಿನ ಜಿಲ್ಲೆಗಳ ರೈತರು ತಂತಮ್ಮ ಜಮೀನುಗಳಿಗೆ ಹೋಗುವ ವೇಳೆ ತಮಟೆಗಳನ್ನು ತೆಗೆದುಕೊಂಡು, ಹೆಲ್ಮೆಟ್ ಧರಿಸಿ, ಜೊತೆಯಲ್ಲಿ ತಮ್ಮ ನಾಯಿಗಳನ್ನು ಜೊತೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ಚಿರತೆಗಳ ದಾಳಿಯಿಂದ ರೈತರ ಜೀವಗಳನ್ನು ರಕ್ಷಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಕಬ್ಬು ಕಟಾವು ಮಾಡಲು 15 ದಿನಗಳು ಬಾಕಿ ಇರುವಂತೆ ಈ ಮಾರ್ಗಸೂಚಿಯನ್ನು ನೀಡಲಾಗಿದೆ. ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಚಿರತೆ ಹಾಗೂ ಹುಲಿಗಳು ರೈತರ ಮೇಲೆ ದಾಳಿ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಹತ್ತಿರದ ಅಮಾನ್‌ಘಡ ಹುಲಿ ಸಂರಕ್ಷಣೆ ಧಾಮದಿಂದ ಈ ವನ್ಯಜೀವಿಗಳು ಆಗಾಗ ಹೊರಗೆ ಸಂಚರಿಸಲು ಬರುತ್ತಿರುತ್ತವೆ.
ಕಳೆದ ವರ್ಷ ಇದೇ ಕಾರಣಕ್ಕೆ ಆರು ಜೀವಗಳು ಬಲಿಯಾದ ಕಾರಣ ಈ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳು ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸಲು ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.