ದೇಶದಲ್ಲಿ ಡೆಡ್ಲಿ ವೈರಸ್ ಹಾವಳಿ ಶುರುವಾದಾಗಿನಿಂದ ಹಗಲು ಇರುಳೆನ್ನದೇ ಆರೋಗ್ಯ ಸಿಬ್ಬಂದಿ ಕೊರೊನಾ ರೋಗಿಗಳ ಉಳಿವಿಗಾಗಿ ಶ್ರಮಿಸುತ್ತಲೇ ಇದ್ದಾರೆ.
ದಿನನಿತ್ಯ ದೇಶದಲ್ಲಿ 2 ಲಕ್ಷ 70 ಸಾವಿರಕ್ಕೂ ಹೆಚ್ಚು ಕೇಸ್ಗಳು ವರದಿಯಾಗ್ತಾನೇ ಇದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ಆಕ್ಸಿಜನ್ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಂತೂ ಆಸ್ಪತ್ರೆ ಬೆಡ್ಗಾಗಿ, ಐಸಿಯುವಿಗಾಗಿ, ಕೃತಕ ಆಮ್ಲಜನಕ ವ್ಯವಸ್ಥೆಗಾಗಿ ಬೇಡಿಕೆ ಇಡುವ ಪೋಸ್ಟ್ಗಳ ಸುರಿಮಳೆಯೇ ಇದೆ.
ಇನ್ನೊಂದು ಕಡೆ ಸ್ವತಃ ವೈದ್ಯರು ದೇಶದಲ್ಲಿ ಕೊರೊನಾ ಪರಿಸ್ಥಿತಿ ಹೇಗಿದೆ ಅನ್ನೋದನ್ನ ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ವಿವರಿಸುತ್ತಿದ್ದಾರೆ. ಈ ಮೂಲಕ ಕೋವಿಡ್ನಿಂದ ಪಾರಾಗೋಕೆ ಏನು ಮಾಡಬೇಕು ಏನು ಮಾಡಬಾರದು ಅನ್ನೋದನ್ನ ತಿಳಿಸುತ್ತಿದ್ದಾರೆ.
ಇದೇ ರೀತಿ ಮುಂಬೈನ ವೈದ್ಯೆಯಾಗಿರುವ ತೃಪ್ತಿ ಗಿಲಾಡಾ ಜನರನ್ನ ರಕ್ಷಣೆ ಮಾಡುವಲ್ಲಿ ನಾವೆಷ್ಟು ಅಸಹಾಯಕರಾಗಿದ್ದೇವೆ ಅನ್ನೋದನ್ನ ಹೇಳುತ್ತಾ ಭಾವುಕರಾಗಿದ್ದು ವೈದ್ಯೆಯ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ.
ದೇಶದಲ್ಲಿ ಕೊರೊನಾ ರೋಗಿಗಳಿಗೆ ಸೌಲಭ್ಯಗಳ ಅಭಾವ ಉಂಟಾಗುತ್ತಿದೆ. ಆದರೂ ಸಹ ವೈದ್ಯಲೋಕಕ್ಕೆ ಏನೂ ಸಹಾಯ ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯನ್ನ ಈ ಹಿಂದೆ ಎಲ್ಲೂ ಕಂಡಿರಲಿಲ್ಲ ಎಂದು ವೈದ್ಯೆ ಹೇಳಿದ್ದಾರೆ.
ಈ ರೀತಿಯ ಪರಿಸ್ಥಿತಿಯನ್ನ ನಾನು ಈ ಹಿಂದೆ ಎಲ್ಲಿಯೂ ನೋಡಿರಲಿಲ್ಲ. ನಾವೆಲ್ಲ ಅಸಹಾಯಕರಾಗಿದ್ದೇವೆ. ವೈದ್ಯರಿಗೆ, ವೈದ್ಯರ ಸಂಬಂಧಿಕರಿಗೇ ಬೆಡ್ ಸಿಗದಂತಹ ಪರಿಸ್ಥಿತಿ ಇದೆ. ಮನೆಯಲ್ಲಿ ಸೋಂಕಿತರಿಗೆ ಆಕ್ಸಿಜನ್ ಹಾಕಿ ಚಿಕಿತ್ಸೆ ನೀಡಲಾಗ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.
ಅಲ್ಲದೇ ಸೋಂಕಿತರಿಗೆ ಇದೇ ವೇಳೆ ಕಿವಿಮಾತನ್ನೂ ಹೇಳಿರುವ ವೈದ್ಯೆ, ಸೋಂಕು ಬಂದೊಡನೆಯೇ ಚಿಂತಾಕ್ರಾಂತರಾಗಬೇಡಿ. ಕೂಡಲೇ ಆಸ್ಪತ್ರೆ ಸೇರುವ ಧಾವಂತ ಬೇಡ. ಎಷ್ಟೋ ಮಂದಿ ಐಸಿಯು ಅವಶ್ಯಕತೆ ಇರುವ ರೋಗಿಗಳಿದ್ದಾರೆ. ಹೀಗಾಗಿ ಸೌಮ್ಯ ಸ್ವಭಾವದ ಲಕ್ಷಣ ಇರುವವರು ಆದಷ್ಟು ಮನೆಯಲ್ಲೇ ಚಿಕಿತ್ಸೆ ಪಡೆಯಿರಿ ಎಂದು ಮನವಿ ಮಾಡಿದ್ರು.
https://www.instagram.com/tv/CN32mL6FRrB/?utm_source=ig_web_copy_link