ರೈಲ್ವೆ ಹಳಿಯಲ್ಲಿ ಆಯತಪ್ಪಿ ಬಿದ್ದಿದ್ದ ಕಂದಮ್ಮನನ್ನ ರಕ್ಷಿಸೋಕೆ ರೈಲ್ವೆ ಪಾಯಿಂಟ್ಸ್ಮ್ಯಾನ್ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ. ಎದೆ ಝಲ್ ಎನ್ನಿಸುವ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
29 ಸೆಕೆಂಡ್ಗಳ ಈ ವಿಡಿಯೋವನ್ನ ಮುಂಬೈ ರೈಲ್ವೆ ವಿಭಾಗ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ. ಈ ವಿಡಿಯೋದಲ್ಲಿ 30 ವರ್ಷದ ಅಂಧೆ ತನ್ನ 6 ವರ್ಷದ ಮಗುವಿನ ಜೊತೆ ಫ್ಲಾಟ್ಫಾರಂನಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಆ ಮಗು ಆಯತಪ್ಪಿ ರೈಲ್ವೆ ಹಳಿಯಲ್ಲಿ ಬಿದ್ದಿದೆ.
ಇಲ್ಲೇ ಕೆಲಸ ನಿರ್ವಹಿಸುತ್ತಿದ್ದ ಪಾಯಿಂಟ್ಸ್ಮನ್ ಮಯೂರ್ ಶೆಲ್ಕೆ ಕೂಡಲೇ ಮಗುವಿನ ಬಳಿ ಓಡಿದ್ದಾರೆ. ಈ ವೇಳೆ ಎದುರಿನಿಂದ ಎಕ್ಸ್ಪ್ರೆಸ್ ರೈಲು ಕೂಡ ಬಂದಿದೆ. ರೈಲು ಹಳಿಯನ್ನ ದಾಟೋದ್ರ ಒಳಗಾಗಿ ಮಗುವಿನ ಎತ್ತಿಕೊಂಡು ಫ್ಲಾಟ್ಫಾರಂಗೆ ಜಿಗಿದಿದ್ದಾರೆ. ವಾಂಗಿನಿ ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಉದ್ಯಾನ್ ಎಕ್ಸ್ಪ್ರೆಸ್ ಬಾಲಕ ಬಿದ್ದಿದ್ದ ಹಳಿಯಲ್ಲೇ ಬರ್ತಿರೋದನ್ನೇ ನಾನು ಗಮನಿಸಿದೆ. ಕೂಡಲೇ ನನ್ನ ತಲೆಗೆ ಆತನನ್ನ ರಕ್ಷಿಸಬೇಕೆಂಬ ಯೋಚನೆ ಬಂದಿತು. ಹೀಗಾಗಿ ನಾನು ಕೂಡಲೇ ಬಾಲಕನ ಬಳಿ ಓಡಿದೆ. ಆದರೆ ಬಳಿಕ ನನಗೆ ಚೂರು ಭಯವಾದ್ದರಿಂದ ನಾನು ನಿಧಾನವಾಗಿ ಓಡಲು ಆರಂಭಿಸಿದೆ. ಆದರೆ ನನ್ನ ಕಣ್ಣೆದುರಿಗೇ ಆ ಬಾಲಕ ಸಾಯೋದನ್ನ ನೋಡೋಕೆ ನನ್ನಿಂದ ಸಾಧ್ಯವಿರಲಿಲ್ಲ. ಹೀಗಾಗಿ ನಾನು ಮತ್ತೆ ನನ್ನ ಪ್ರಯತ್ನ ಮುಂದುವರಿಸಿದೆ ಎಂದು ಶೆಲ್ಕೆ ಹೇಳಿದ್ದಾರೆ.
ತಮ್ಮ ಪೋಷಕರ ಜೊತೆ ನೇರಾಲ್ನಲ್ಲಿ ನೆಲೆಸಿರುವ ಶೆಲ್ಕೆಗೆ ಪತ್ನಿ ಹಾಗೂ 10 ವರ್ಷದ ಗಂಡು ಮಗನಿದ್ದಾನೆ. ಈ ವಿಚಾರವಾಗಿಯೂ ಮಾತನಾಡಿದ ಶೆಲ್ಕೆ, ಈ ಘಟನೆ ನಡೆದು 2 ದಿನ ಕಳೆದ್ರೂ ನಾನು ಮನೆಯವರಿಗೆ ಈ ವಿಚಾರವನ್ನ ಹೇಳಿರಲಿಲ್ಲ. ಆದರೆ ವಿಡಿಯೋ ವೈರಲ್ ಆದ ಬಳಿಕ ಮನೆಯಲ್ಲಿ ವಿಚಾರ ತಿಳಿದಿದೆ. ನನ್ನ ತಾಯಿ ಮೊದಲು ನನಗೆ ಬೈದರು. ಆದರೆ ಬಳಿಕ ನನ್ನ ಸಮಯಪ್ರಜ್ಞೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ರು. ನನ್ನ ಪತ್ನಿ ಕೂಡ ನನ್ನ ಮೇಲೆ ಕೋಪಗೊಂಡಿದ್ದಳು. ಈ ರೀತಿ ಸಾಹಸ ಮಾಡುವ ಮುನ್ನ ನಮ್ಮ ಬಗ್ಗೆಯೂ ಯೋಚಿಸಿ ಎಂದು ಹೇಳಿದಳು. ಆದರೆ ಈಗ ಆಕೆ ಖುಷಿಯಾಗಿದ್ದಾಳೆ ಎಂದು ಹೇಳಿದ್ದಾರೆ.
ಶೆಲ್ಕೆ ಅವರ ಸಾಧನೆಯನ್ನ ಕೇಂದ್ರ ರೈಲ್ವೆ ಇಲಾಖೆ ಸಚಿವ ಪಿಯೂಷ್ ಗೋಯಲ್ ಕೂಡ ಟ್ವಿಟರ್ನಲ್ಲಿ ಕೊಂಡಾಡಿದ್ದಾರೆ. ಅಲ್ಲದೇ ಶೆಲ್ಕೆ ಸಾಧನೆಗೆ ಮೆಚ್ಚಿ ಕೇಂದ್ರ ರೈಲ್ವೆ ಇಲಾಖೆ ಪ್ರಶಸ್ತಿಯನ್ನೂ ಘೋಷಿಸಿದೆ.