ಜೆಸಿಬಿ ಒಂದರ ಒಳಗೆ ಸಿಲುಕಿಕೊಂಡಿದ್ದ ಹೆಬ್ಬಾವನ್ನು ರಕ್ಷಿಸಲಾದ ಘಟನೆ ಒಡಿಶಾದಲ್ಲಿ ಜರುಗಿದೆ. ಬೆಹ್ರಾಮ್ಪುರದ ಸಣ್ಣದೊಂದು ಅಣೆಕಟ್ಟೆಯ ಬಳಿ ನಡೆಯುತ್ತಿರುವ ನಿರ್ಮಾಣ ಕಾರ್ಯವೊಂದರಲ್ಲಿ ಭಾಗಿಯಾಗಿದ್ದ ವೇಳೆ ಈ ಜೆಸಿಬಿಯಲ್ಲಿ ಹೆಬ್ಬಾವುಗಳು ಸಿಕ್ಕಿವೆ.
ಸ್ಥಳಕ್ಕೆ ಧಾವಿಸಿದ ಉರಗ ತಜ್ಞರು ಹಾವು ರಕ್ಷಿಸಲು ಸ್ಥಳೀಯರಿಗೆ ನೆರವಾಗಿದ್ದಾರೆ ಎನ್ನಲಾಗಿದೆ. ಹೆಬ್ಬಾವು 11 ಅಡಿ ಉದ್ದವಿತ್ತು ಎಂದು ಉರಗ ತಜ್ಞ ಸ್ವಾಧೀನ್ ಕುಮಾರ್ ಸಾಹು ತಿಳಿಸಿದ್ದಾರೆ.
“ಕಾಲುವೆ ತೋಡುವ ವೇಳೆ ಭಾರೀ ಗಾತ್ರದ ಹಾವುಗಳನ್ನು ನೋಡಿದ್ದೇವೆ. ಬಹುಶಃ ಚಳಿ ಕಾರಣದಿಂದ ಅವು ಅಲ್ಲಿಗೆ ಬಂದು ಮೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದವು ಎನಿಸುತ್ತದೆ. ಇವುಗಳಲ್ಲಿ ಒಂದು ಹಾವು ಆಕ್ರಮಣಕಾರಿಯಾಗಿ ನಮ್ಮ ಮೇಲೆ ದಾಳಿ ಮಾಡಲು ಮುಂದೆ ಬಂದಿತ್ತು. ಇದು ಬಹಳ ಭಯ ಹುಟ್ಟಿಸುವಂತೆ ಇತ್ತು. ಸ್ಥಳೀಯರು ಹಾಗೂ ಉರಗ ಸಹಾಯವಾಣಿ ಸದಸ್ಯರು ನಮ್ಮ ಸಹಾಯಕ್ಕೆ ಧಾವಿಸಿದರು,” ಎಂದು ಜೆಸಿಬಿಯ ಚಾಲಕ ತಿಳಿಸಿದ್ದಾರೆ.