ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ ಹಸುವೊಂದು ಸಿಂಹಕ್ಕೆ ಆಹಾರವಾದ ದೃಶ್ಯ ವೈರಲ್ ಆಗಿದ್ದು, ಪೂರ್ವನಿಯೋಜಿತ ವಿಡಿಯೋದಂತಿರುವ ಈ ಬಗ್ಗೆ ತನಿಖೆಗೂ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.
ಏಷ್ಯಾ ಸಿಂಹಗಳ ಸಂರಕ್ಷಿತ ಪ್ರದೇಶಗಳಲ್ಲಿ ಗಿರ್ ಅರಣ್ಯ ಅತ್ಯಂತ ಪ್ರಮುಖವಾದದ್ದು. ಅಲ್ಲಿ ಹಸು ಹೇಗೆ ಬರಲು ಸಾಧ್ಯವಾಯಿತು ? ಅದನ್ನು ತಿನ್ನಲು ಸಿಂಹ ಬರುವುದು, ಅದನ್ನು ವಿಡಿಯೋ ಮಾಡಿರುವುದು ಎಲ್ಲವೂ ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ.
ವೈರಲ್ ಆಗಿರುವ ದೃಶ್ಯಾವಳಿಗಳಲ್ಲಿ ಹಸುವೊಂದನ್ನು ಹಗ್ಗದಿಂದ ಕಟ್ಟಿಡಲಾಗಿದೆ. ಸಿಂಹ ದಾಳಿ ಮಾಡುವ ಸನ್ನಿವೇಶವನ್ನು ಸೆರೆ ಹಿಡಿದು ವೈರಲ್ ಮಾಡುವುದಕ್ಕಾಗಿಯೇ ವಿಡಿಯೋ ಮಾಡಿದಂತಿದ್ದು, ಸ್ವಲ್ಪ ಹೊತ್ತಿನ ನಂತರ ಗೋವಿನ ಮೇಲೆ ಸಿಂಹ ಎಗರಿ ಬೀಳುತ್ತದೆ. ಅಲ್ಲಿರುವ ಕೆಲವರು ಅದನ್ನು ಮೊಬೈಲ್ ಗಳಲ್ಲಿ ಸೆರೆ ಹಿಡಿಯುತ್ತಿರುವುದೂ ದೃಶ್ಯದಲ್ಲಿದೆ.
ಇದು ಕಾನೂನುಬಾಹಿರ ಕೃತ್ಯವಾಗಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಅರಣ್ಯ ಇಲಾಖೆ ತಿಳಿಸಿದೆಯಲ್ಲದೆ, ವಿಡಿಯೋದಲ್ಲಿ ಇರುವವರನ್ನು ಬಂಧಿಸುವಂತೆ ನೆಟ್ಟಿಗರೂ ಆಗ್ರಹಿಸಿದ್ದಾರೆ.