ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕೆ ಸಂಸದೆಯೊಬ್ಬರನ್ನು ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)ಯ ಮಹಿಳಾ ಅಧಿಕಾರಿಯೊಬ್ಬರು ನೀವು ಭಾರತೀಯರಾ…..ಎಂದು ಪ್ರಶ್ನಿಸುವ ಮೂಲಕ ಅವಮಾನ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಡಿಎಂಕೆ ನಾಯಕಿ ಹಾಗೂ ಸಂಸದೆ ಕನಿಮೋಳಿ, ಘಟನೆ ಕುರಿತಂತೆ ಭಾನುವಾರದಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದು, ಇದಕ್ಕೆ ಈಗ ಪರ -ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಹಿಳಾ ಅಧಿಕಾರಿ ತಮಗೆ ಹಿಂದಿಯಲ್ಲಿ ಮಾತನಾಡಿಸಿದರು. ಈ ವೇಳೆ ತಮಿಳು ಅಥವಾ ಇಂಗ್ಲಿಷ್ನಲ್ಲಿ ಮಾತನಾಡುವಂತೆ ಕೋರಿದೆ. ಆಗ ಅಧಿಕಾರಿ, ಹಿಂದಿ ಬಾರದ ನೀವು ಭಾರತೀಯರು ಹೌದೋ ಅಲ್ಲವೋ ಎಂದು ಪ್ರಶ್ನಿಸಿದರು. ಹಿಂದಿ ತಿಳಿದಿರುವುದು ಭಾರತೀಯತ್ವಕ್ಕೆ ಸಮಾನ ಎಂಬ ನಿಯಮ ಯಾವಾಗನಿಂದ ಜಾರಿಗೆ ಬಂದಿದೆ ಎಂದು ಕನಿಮೋಳಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.