ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಕೊರೊನಾ ಸೋಂಕಿಗೆ ಒಳಗಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಯಾಬಿಟೀಸ್, ಅಧಿಕ ರಕ್ತದೊತ್ತಡ, ಹೈಫೋ ಥೈರಾಯ್ಡ್ ಸಮಸ್ಯೆಯ ಜೊತೆಗೆ ಕೊರೊನಾದಿಂದಲೂ ಬಳಲುತ್ತಿರುವ ಶಶಿಕಲಾಗೆ ಆಸ್ಪತ್ರೆಯ ಟ್ರಾಮಾ ಕೇರ್ ಕೇಂದ್ರದಲ್ಲಿ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಹೆಲ್ತ್ ಬುಲೆಟಿನ್ನಲ್ಲಿ ಹೇಳಿದೆ.
ಶಶಿಕಲಾರ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ ಎಂದು ಸೋದರಳಿಯ ಟಿ.ಟಿ.ವಿ. ದಿನಕರನ್ ಮಾಹಿತಿ ನೀಡಿದ್ದಾರೆ. ವಿ.ಕೆ. ಶಶಿಕಲಾರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಜೊತೆಗೆ ಅವರಿಗೆ ಬೇರೆ ಕಾಯಿಲೆಗಳೂ ಇರೋದ್ರಿಂದ ಕೃತಕ ಆಮ್ಲಜನಕವನ್ನ ನೀಡಲಾಗಿದೆ. ಸಿಟಿ ಸ್ಕ್ಯಾನ್ ಅಗತ್ಯವಿದೆಯೇ ಇಲ್ಲವೇ ಅನ್ನೋದರ ಬಗ್ಗೆ ವೈದ್ಯರು ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ರು.
63 ವರ್ಷದ ಶಶಿಕಲಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ಆಪ್ತರಾಗಿದ್ದರು. ಹಾಗೂ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಡಿಯಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಶಶಿಕಲಾರ ಜೈಲು ಶಿಕ್ಷೆ ಕೊನೆಗೊಳ್ಳಲಿತ್ತು. ಆದರೆ ಕೊರೊನಾ ಹಿನ್ನೆಲೆ ಬಿಡುಗಡೆ ಪ್ರಕ್ರಿಯೆ ವಿಳಂಬಗೊಳ್ಳುವ ಸಾಧ್ಯತೆ ದಟ್ಟವಾಗಿದೆ.