ಚೀನಾ – ಭಾರತ ಗಡಿಯಲ್ಲಿ ಇತ್ತೀಚೆಗೆ ಉಂಟಾದ ಸಂಘರ್ಷದಿಂದ ಅನೇಕ ಬದಲಾವಣೆಗಳು ಆಗುತ್ತಿವೆ ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳನ್ನು ನೋಡುತ್ತಿದ್ದೇವೆ. ಇದೀಗ ಮತ್ತೊಂದು ಮಹತ್ತರವಾದ ವಿಚಾರ ನಡೆದಿದೆ. ಅದೇ, ಹಳ್ಳಿಯೊಂದರ ಹೆಸರು ಬದಲಾವಣೆ ಒತ್ತಾಯ.
ಹೌದು, ಕೇರಳದ ಪತ್ತನಂತಿಟ್ಟ ಜಿಲ್ಲೆಯ ಚೀನಾ ಮುಕ್ಕ್ ಎಂಬ ಕುಗ್ರಾಮದ ಹೆಸರು ಬದಲಾವಣೆ ಮಾಡಲು ಇದೀಗ ಒತ್ತಾಯ ಕೇಳಿ ಬಂದಿದೆ. ಸಂಘರ್ಷದ ನಂತರ ಈ ಹಳ್ಳಿಯ ಜನ ತಮ್ಮ ಊರಿನ ಹೆಸರು ಬದಲಾಯಿಸುವಂತೆ ಒತ್ತಾಯಿಸಿದ್ದಾರೆಂದು ಹೇಳಲಾಗಿದೆ. ಈ ವಿಚಾರವಾಗಿ ಸಭೆ ಕರೆಯಲಾಗುತ್ತದೆ ಎಂದು ಅಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ರಜನಿ ಹೇಳಿದ್ದಾರೆ.
1952 ರಲ್ಲಿ ನಡೆದ ಲೋಕಸಭಾ ಚುನಾವಣೆಯ ವೇಳೆ ನೆಹರು ಪ್ರಚಾರಕ್ಕೆ ಕೇರಳಕ್ಕೆ ಬಂದಿದ್ದರು. ಇಡೀ ಕೇರಳದಲ್ಲೇ ಕಾಂಗ್ರೆಸ್ ಬಾವುಟ ಹಾರುತ್ತಿದ್ದರೆ, ಕೊನ್ನಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಕೆಂಪು ಬಾವುಟಗಳು ಇದ್ದವು. ಇದನ್ನು ನೋಡಿದ ನೆಹರು ಇದೇನು ಚೀನಾ ವೃತ್ತವೇ ಎಂದು ಪ್ರಶ್ನೆ ಮಾಡಿದ್ದರಂತೆ. ಆಗಿನಿಂದಲೂ ಇದನ್ನು ಚೀನಾ ಮುಕ್ಕ್ ಎಂದು ಕರೆಯಲಾಗುತ್ತಿದೆಯಂತೆ.