ರಾಜಘರ್: ಮಧ್ಯಪ್ರದೇಶದ ಭೋಪಾಲ್ ನಿಂದ 141 ಕಿಮೀ ದೂರದ ರಾಜಘರ್ ಜಿಲ್ಲೆಯ ಪರ್ಬತಿ ನದಿ ದಂಡೆಯಲ್ಲಿ ಸಾವಿರಾರು ಜನ ನಿಧಿ ಹುಡುಕಾಟದಲ್ಲಿ ತೊಡಗಿದ್ದಾರೆ.
ಕೆಲ ದಿನಗಳ ಹಿಂದೆ ಶಿವಪುರ ಎಂಬಲ್ಲಿ ಮೊಘಲರ ಕಾಲದ ಕೆಲವು ನಾಣ್ಯಗಳು ದೊರಕಿದ್ದವು. ಅದೇ ರೀತಿ ಪರ್ಬತಿ ನದಿ ದಂಡೆಯಲ್ಲೂ ಮೊಘಲ ಆಡಳಿತದ ಅವಧಿಯ ನಿಧಿ ಹಾಗೂ ಪುರಾತನ ನಾಣ್ಯಗಳಿವೆ ಎಂಬ ವದಂತಿ ನಂಬಿದ ಜನ ಹುಡುಕಾಟ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಮೂರು ದಿನಗಳಿಂದ ಒಣಗಿದ ನದಿ ದಂಡೆಯಲ್ಲಿ ಬೀಡು ಬಿಟ್ಟು ಅಗೆಯುತ್ತಿದ್ದಾರೆ. ಕೇವಲ ರಾಜಘರ್ ಮಾತ್ರವಲ್ಲದೇ ಪಕ್ಕದ ಗುಣಾ ಹಾಗೂ ಸೆಶೊರ್ ಜಿಲ್ಲೆಗಳ ಜನರೂ ಆಗಮಿಸಿದ್ದಾರೆ.
ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರೂ ಜನ ಕೇಳುತ್ತಿಲ್ಲ. ಇದರಿಂದ ಭದ್ರತೆ ವ್ಯವಸ್ಥೆ ಮಾಡಲಾಗಿದೆ ಎಂದು ರಾಜಘರ್ ಎಎಸ್ಪಿ ಪ್ರದೀಪ ಕುಮಾರ್ ಹೇಳಿದ್ದಾರೆ. ಇಲ್ಲಿ ನಾಣ್ಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ. ಜಿಲ್ಲಾಡಳಿತವೂ ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ರಾಮ ನರೇಶ ಸಿಂಗ್ ಎಂಬವರು ಹೇಳಿದ್ದಾರೆ.