ಪಶ್ಚಿಮ ಬಂಗಾಳದ ಝಾರ್ ಗ್ರಾಮ್ ದಟ್ಟಡವಿಗಳ ನಡುವೆ ಇರುವ ಲಾಲ್ಬಜಾರ್ ಗ್ರಾಮ ತನ್ನ ಸೌಂದರ್ಯದಿಂದ ಕಣ್ಮನ ಸೆಳೆಯುತ್ತದೆ. ಈ ಪುಟ್ಟ ಗ್ರಾಮದ ಮನೆಗಳ ಗೋಡೆಗಳ ಮೇಲೆ ಮೂಡಿ ಬಂದಿರುವ ಸುಂದರ ಪೇಂಟಿಂಗ್ಗಳು ಇತ್ತೀಚೆಗೆ ಬಹಳ ಸುದ್ದಿಯಲ್ಲಿವೆ.
ಲೋಧಾ ಸಮುದಾಯದ ಬುಡಕಟ್ಟು ಜನಾಂಗಕ್ಕೆ ಸೇರಿದ ಜನರೇ ಇರುವ ಈ ಊರಿನ ಮನೆಗಳನ್ನು ಅಲ್ಲಿನ ಜನರೇ ಹೀಗೆ ಸಿಂಗರಿಸಿದ್ದಾರೆ. ಈ ಗ್ರಾಮವೀಗ ಪ್ರವಾಸೀ ತಾಣವಾಗಿ ಮಾರ್ಪಾಡಾಗುವ ಸಾಧ್ಯತೆಗಳು ಇವೆ.
ಊರಿನ ಸೌಂದರ್ಯಕ್ಕೆ ತಕ್ಕಂತೆ ’ಖ್ವಾಬ್ಗಾಂವ್’ (ಕನಸುಗಳ ಊರು) ಎಂದು ಅಡ್ಡನಾಮವನ್ನೂ ಇಡಲಾಗಿದೆ. ಈ ಊರಿನ ಜನರು ಅರಣ್ಯೋತ್ಪನ್ನಗಳ ಸಂಗ್ರಹಣೆ, ಕೃಷಿ ಹಾಗೂ ದಿನಗೂಲಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಕೋಲ್ಕತ್ತಾ ಮೂಲದ ಕಲಾವಿದ ಮೃಣಾಲ್ ಮೊಂಡಲ್ ಅವರು 2014ರಲ್ಲಿ ಭೇಟಿ ಕೊಟ್ಟ ವೇಳೆ ಲಾಲ್ಬಜಾರ್ನ ಜನರ ಕ್ರಿಯಾಶೀಲತೆ ಮೆಚ್ಚಿಕೊಂಡು ಇಲ್ಲಿನ ಜನರೊಂದಿಗೆ ಸೇರಿಕೊಂಡು ಊರಿಗೆ ಹೊಸ ಕಾಯಕಲ್ಪ ಕೊಡುವ ಕೆಲಸಕ್ಕೆ ಮುಂದಾದರು. ಮಂಡಲ್ರ ʼಚಲನಚಿತ್ರ ಅಕಾಡೆಮಿʼಯು ಸಮಾನಮನಸ್ಕ ಕಲಾವಿದರು ಹಾಗೂ ಬುದ್ಧಿಜೀವಿಗಳ ಸಮಾಗಮವಾಗಿದ್ದು, ಗ್ರಾಮೀಣ ಪ್ರದೇಶಗಳ ಹಾಗೂ ಹಿಂದುಳಿದ ಸಮುದಾಯಗಳಿಗೆ ಸೇರಿದ ಕಲೆ ಹಾಗೂ ಪರಂಪರೆಗಳಿಗೆ ಮರುಜೀವ ಕೊಡಲು ತನ್ನದೇ ಹಾದಿಯಲ್ಲಿ ಶ್ರಮಿಸುತ್ತಾ ಬಂದಿದೆ.
ಇದೀಗ ಕಲಾತ್ಮಕ ಪೇಂಟಿಂಗ್ಗಳ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಲು ಆರಂಭಿಸಿರುವ ಕಾರಣ ಸಾಂಪ್ರದಾಯಿಕ ಕಟುಂಕುಟುಂ ಗೊಂಬೆಗಳು ಹಾಗೂ ಖಟಾ ಕಲೆ ಮತ್ತು ಪರಸರ-ಸ್ನೇಹಿ ಪೇಂಟಿಂಗ್ಗಳ ಮೂಲಕ ಜೀವನೋಪಾಯದ ಹೊಸ ಮಾರ್ಗಗಳು ಗ್ರಾಮಸ್ಥರನ್ನು ಅರಸಿ ಬಂದಿವೆ.
ಊರಿನ ಮನೆಗಳ ಗೋಡೆಗಳಿಗೆ ಪ್ರತಿ ವರ್ಷವೂ ಹೊಸದಾಗಿ ಪೇಂಟಿಂಗ್ ಮಾಡಲಾಗುತ್ತದೆ. ಗ್ರಾಮದ ಹಬ್ಬಗಳು, ಅಲ್ಲಿನ ಪ್ರಾಣಿಗಳು, ಜನರ ದಿನನಿತ್ಯದ ಜೀವಗಳನ್ನು ಥೀಮ್ ಮಾಡಿಕೊಂಡು ಪೇಂಟ್ ಮಾಡಲಾಗುತ್ತದೆ. ಕಳೆದ ವರ್ಷ ಕೊರೋನಾ ಅಬ್ಬರವಿದ್ದ ಕಾರಣ, ಸೋಂಕಿನಿಂದ ರಕ್ಷಿಸಿಕೊಳ್ಳಲು ಜಾಗೃತಿ ಮೂಡಿಸುವ ಪೇಂಟ್ಗಳನ್ನೂ ಸಹ ಗ್ರಾಮಸ್ಥರು ತಮ್ಮ ಮನೆಗಳ ಮೇಲೆ ಹಾಕಿದ್ದರು.