ಪೊಲೀಸರ ಎನ್ ಕೌಂಟರ್ ಗೆ ಬಲಿಯಾದ ಕುಖ್ಯಾತ ಪಾತಕಿ ವಿಕಾಸ್ ದುಬೆ ಸಾವಿನ ರಹಸ್ಯ ಬಯಲಾಗಿದೆ.
ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆಯಾಗಿದ್ದು, ಸಾವಿನ ನಿಖರ ಕಾರಣವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಕಾನ್ಪುರದ ಆರು ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾದ ದುಬೆಯನ್ನು ಉಜ್ಜಯಿನಿಯಲ್ಲಿ ಬಂಧಿಸಿದ ವಿಶೇಷ ತನಿಖೆ ತಂಡ, ಕಾನ್ಪುರಕ್ಕೆ ಕರೆತರುತ್ತಿದ್ದರು.
ಈ ಸಂದರ್ಭದಲ್ಲಿ ಹೆದ್ದಾರಿ ಬಳಿ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.
ದುಬೆ ಮೇಲೆ ಒಟ್ಟು ಆರು ಗುಂಡುಗಳು ಹಾರಿದ್ದು, ಈ ಪೈಕಿ ಎರಡು ಗುಂಡು ಎಡಬದಿಯ ಎದೆ ಭಾಗ ಹೊಕ್ಕಿದ್ದು, ಇನ್ನೊಂದು ಗುಂಡು ಬಲ ತೋಳಿಗೆ ನೆಟ್ಟಿದೆ. ಈ ಬುಲೆಟ್ ಗಳು ಎಷ್ಟು ದೂರದಿಂದ ಬಂದು ತಗುಲಿದೆ ಎಂಬುದು ಉಲ್ಲೇಖವಾಗಿಲ್ಲ. ದೇಹದ ಮುಂಭಾಗದಿಂದಲೇ ಗುಂಡು ಹೊಕ್ಕಿರುವುದು, ಎಸ್ಐಟಿ ಜೊತೆಗೆ ಜಗಳಕ್ಕಿಳಿದಾಗ ಆದ ಎನ್ ಕೌಂಟರ್ ಎಂಬುದನ್ನು ಸ್ಪಷ್ಟಪಡಿಸುತ್ತದೆ. ತೀವ್ರ ಗಾಯಗೊಂಡು ರಕ್ತಸ್ರಾವವಾಗಿದ್ದು, ಆಘಾತದಿಂದ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದೊಂದು ವ್ಯವಸ್ಥಿತ ನಕಲಿ ಎನ್ ಕೌಂಟರ್ ಎಂಬ ಅರೋಪಗಳಿದ್ದು, ಸುಪ್ರೀಂ ಕೋರ್ಟ್ ಮುಂದೆ ಪ್ರಕರಣ ಇದೆ.