ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವಿಕಾಸ್ ದುಬೆಯನ್ನು ಬಂಧಿಸಲಾಗಿದೆ. ಘಟನೆ ನಡೆದ 6 ದಿನಗಳ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೆ ಸಹಚರ ಅಮರ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದರು.
ಪ್ರಮುಖ ಆರೋಪಿ ವಿಕಾಸ್ ದುಬೆ ಹರಿಯಾಣದ ಹೋಟೆಲ್ ನಲ್ಲಿ ಕಾಣಿಸಿಕೊಂಡಿದ್ದು ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದ. ಈ ನಡುವೆ ಆತ ಗ್ರೇಟರ್ ನೋಯ್ಡಾದಲ್ಲಿ ಕೋರ್ಟ್ ಗೆ ಶರಣಾಗಲಿದ್ದಾನೆ ಎಂದು ಹೇಳಲಾಗಿತ್ತು. ಆದರೆ, ಸಿನಿಮೀಯ ಶೈಲಿಯ ಕಾರ್ಯಾಚರಣೆ ನಡೆಸಿದ ಪೊಲೀಸರು ಉಜ್ಜಯಿನಿಯಲ್ಲಿ ವಿಕಾಸ್ ದುಬೆಯನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಕಾನ್ಪುರ್ ದಲ್ಲಿ ವಿಕಾಸ್ ದುಬೆ ಬಂಧನಕ್ಕೆ ತೆರಳಿದ್ದ ವೇಳೆ ಗುಂಡುಹಾರಿಸಿ 8 ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. ಪೊಲೀಸ್ ಠಾಣೆಯಿಂದಲೇ ವಿಕಾಸ್ ದುಬೆಗೆ ಮಾಹಿತಿ ರವಾನೆಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಆತನಿಗೆ ಸೇರಿದ ಮನೆ ಮತ್ತು ವಾಹನಗಳನ್ನು ಕಾನ್ಪುರ್ ಜಿಲ್ಲಾಡಳಿತ ಧ್ವಂಸಗೊಳಿಸಿತ್ತು.