ಹೆದ್ದಾರಿಗಳು ವಾಹನ ಮತ್ತು ಮನುಷ್ಯ ಸ್ನೇಹಿಯಾಗಿ ಇದ್ದಷ್ಟೇ ಪ್ರಾಣಿ ಸ್ನೇಹಿಯೂ ಆಗಿರಬೇಕು.
ಕೇರಳದ ಕಾಡಂಚಿನ ಹೆದ್ದಾರಿಯಲ್ಲಿ ತಡೆಗೋಡೆ ದಾಟಲಾಗದೆ ಮರಿಯಾನೆ ಪಡಿಪಾಟಲು ಪಡುವ ವೀಡಿಯೋಗೆ ಜನ ಮಮ್ಮಲ ಮರುಗಿದ್ದಾರೆ.
ಆನೆಗಳ ಹಿಂಡು ರಸ್ತೆ ದಾಟಿ ಮುಂದೆ ಹೋಗುತ್ತಿರುತ್ತವೆ. ರಸ್ತೆ ಬದಿಗೆ ಹಾಕಿದ್ದ ಎತ್ತರದ ತಡೆಗೋಡೆ ದಾಟಲು ಮರಿಯಾನೆ ಪ್ರಯಾಸಪಡುತ್ತಿರುತ್ತದೆ. ಕೊನೆಗೆ ತಾಯಿ ಬಂದು ಸಹಾಯ ಮಾಡುವ ವೀಡಿಯೋವನ್ನು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಕೂಡ ಟ್ವೀಟ್ ಮಾಡಿದ್ದು, ನಮ್ಮ ಸೌಕರ್ಯಗಳು ವನ್ಯಜೀವಿಗಳ ಬಗ್ಗೆಯೂ ಕಾಳಜಿ ವಹಿಸುವಂತೆ ನಿರ್ಮಾಣಗೊಳ್ಳಬೇಕು ಎಂದಿದ್ದಾರೆ.
ಅಲ್ಲದೆ, ಆನೆಗಳು ದಾಟುವವರೆಗೆ ಕಾದು, ಅವುಗಳ ಸಿಟ್ಟು ಹೆಚ್ಚಿಸದೆ ತೆರಳಿದ ಟ್ರಕ್ ಚಾಲಕರ ನಡೆ ಶ್ಲಾಘನೀಯ ಎಂದಿದ್ದಾರೆ.