ಬಿಹಾರದ ವೈಶಾಲಿ ಜಿಲ್ಲೆಯ ಬಿದುಪುರದಲ್ಲಿರುವ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸೈನಿಕ ಹುದ್ದೆಗೆ ಭರ್ತಿ ಮಾಡಿಕೊಳ್ಳುವ ಸಲುವಾಗಿ ಪರೀಕ್ಷೆಯನ್ನ ನಡೆಸಲಾಗಿತ್ತು. ಈ ಪರೀಕ್ಷೆಯ ವೇಳೆ ಅಭ್ಯರ್ಥಿಯಿಂದ ಎಲೆಕ್ಟ್ರಾನಿಕ್ ಡಿವೈಸ್ ಒಂದನ್ನ ವಶಪಡಿಸಿಕೊಳ್ಳಲಾಗಿದೆ.
ಈ ಡಿವೈಸ್ನ್ನು ಆತ ಮಾಸ್ಕ್ನ ಒಳಗಡೆ ಅಳವಡಿಸಿಕೊಂಡಿದ್ದ ಎನ್ನಲಾಗಿದೆ. ಪರೀಕ್ಷೆಯಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿದ್ದರಿಂದ ಅಭ್ಯರ್ಥಿ ನಕಲು ಮಾಡಲು ಇದೇ ಮಾಸ್ಕ್ನ ಸಹಾಯ ಪಡೆಯಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ಪರೀಕ್ಷೆಯ ವೇಳೆ ಚೆಕಿಂಗ್ ಮಾಡಿದ ವೇಳೆ ಅಭ್ಯರ್ಥಿಯ ಈ ಕಳ್ಳಾಟ ಬಟಾಬಯಲಾಗಿದೆ.
ಅಶುತೋಶ್ ಕುಮಾರ್ ಹಾಗೂ ಮಮ್ರಾಜ್ ಎಂಬ ಅಧಿಕಾರಿಗಳು ಅಭ್ಯರ್ಥಿಯು ಮಾಸ್ಕ್ನ ಒಳಗಡೆ ಅಡಗಿಸಿ ಇಟ್ಟಿದ್ದ ಈ ಡಿವೈಸ್ನ್ನು ಪತ್ತೆ ಮಾಡಿದ್ದಾರೆ. ಇದರಲ್ಲಿ ಪ್ರಶ್ನೆ ಪತ್ರಿಕೆ ಸಂಬಂಧಿಸಿದ ಉತ್ತರಗಳಿದ್ದವು ಎನ್ನಲಾಗಿದೆ. ಆರೋಪಿ ಅಭ್ಯರ್ಥಿ ವಿಶಾಲ್ ಕುಮಾರ್ರನ್ನ ಪರೀಕ್ಷಾ ಹಾಲ್ನಿಂದ ಹೊರಗಟ್ಟಲಾಗಿದೆ.
ಈ ಮಾಸ್ಕ್ನ ಫೋಟೋ ನೋಡಿದ ಮೊಬೈಲ್ ಅಂಗಡಿ ಮಾಲೀಕರೊಬ್ಬರು ಈ ಮಾಸ್ಕ್ ಮೊಬೈಲ್ನಂತೆ ಕೆಲಸ ಮಾಡುವ ರೀತಿಯಲ್ಲಿ ಮಾರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮೊಬೈಲ್ನ ಬಿಡಿ ಭಾಗಗಳನ್ನ ಮಾಸ್ಕ್ನ ಒಳಕ್ಕೆ ಅಳವಡಿಸಿ ಈ ಡಿವೈಸ್ನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ರು.