ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ಸನಿಹಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ವಾರಣಾಸಿಯ ನೇಕಾರರೊಬ್ಬರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ವಿಶೇಷ ಉಡುಗೊರೆಯೊಂದನ್ನು ಕಳುಹಿಸಿಕೊಟ್ಟಿದ್ದಾರೆ.
ಕೋವಿಡ್-19 ಸಾಂಕ್ರಮಿಕದಿಂದ ರಕ್ಷಿಸಿಕೊಳ್ಳಲೆಂದು ಮಾಸ್ಕ್ ಅನ್ನು ನೇಯ್ದಿರುವ ಬಚ್ಚಾ ಲಾಲ್, ಪ್ರಧಾನಿಗಾಗಿ ರೇಷ್ಮೆ ಹಾಗೂ ಹತ್ತಿಯನ್ನು ಬಳಸಿ, ಅದರ ಮೇಲೆ ’ಜೈ ಶ್ರೀರಾಮ್, ಅಯೋಧ್ಯಾ ಪವಿತ್ರ ಧಾಮ್’ ಎಂದು ಹೆಣೆದಿದ್ದಾರೆ. ಇದೇ ಆಗಸ್ಟ್ 5ರಂದು ರಾಮ ಮಂದಿರದ ಭೂಮಿ ಪೂಜೆಯನ್ನು ನೆರವೇರಿಸಲಾಗುವುದು.
ಮಾಸ್ಕ್ ಬದಲಿಗೆ ಗಮ್ಚಾವನ್ನು ಪ್ರಧಾನಿ ಧರಿಸುತ್ತಾರೆ ಎಂದು ತಿಳಿದ ಈ ನೇಕಾರ, ಈ ಮಾಸ್ಕ್ ಅನ್ನು 72 ಇಂಚು ಉದ್ದ ಹಾಗೂ 22 ಇಂಚು ಅಗಲವಾಗಿ ನೇಯ್ದುಕೊಟ್ಟಿದ್ದಾರೆ. ತಮ್ಮ ಈ ವರ್ಕ್‌ಗಾಗಿ ಬಚ್ಚಾ ಲಾಲ್‌ಗೆ ಎರಡು ವಾರಗಳು ಹಿಡಿದಿವೆಯಂತೆ. ಜಿಲ್ಲಾಡಳಿತದ ಅಧಿಕಾರಿಗಳ ಮೂಲಕ ಪ್ರಧಾನಿಗೆ ಈ ಮಾಸ್ಕ್ ತಲುಪಿಸಿದ್ದಾರೆ ಲಾಲ್.