ಜಮ್ಮುವಿನ ವೈಷ್ಣೋದೇವಿ ದೇವಾಲಯವು ಕಳೆದ 20 ವರ್ಷಗಳಲ್ಲಿ ಅಂದರೆ 2000 ದಿಂದ 2020ರವರೆಗೆ 1800 ಕೆಜಿ ಚಿನ್ನ, 4700 ಕೆ.ಜಿ. ಬೆಳ್ಳಿ ಹಾಗೂ 2000 ಕೋಟಿ ರೂಪಾಯಿ ನಗದನ್ನ ದೇಣಿಗೆ ರೂಪದಲ್ಲಿ ಪಡೆದುಕೊಂಡಿದೆ. ಹೇಮಂತ್ ಗೌನಿಯಾ ಎಂಬವರು ಸಲ್ಲಿಸಿದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ಉತ್ತರಿಸಿ ಈ ಮಾಹಿತಿಯನ್ನ ಬಹಿರಂಗಗೊಳಿಸಲಾಗಿದೆ.
ಇಷ್ಟು ವರ್ಷಗಳಲ್ಲಿ ದೇವಸ್ಥಾನದ ದೇಣಿಗೆ ರೂಪದಲ್ಲಿ ಎಷ್ಟು ಸಂಪತ್ತು ಸಂಪಾದಿಸಿದೆ ಎಂಬುದನ್ನ ತಿಳಿದುಕೊಳ್ಳಲು ಬಯಸಿದೆ. ವರ್ಷದಲ್ಲಿ ಲಕ್ಷಾನುಗಟ್ಟಲೇ ಯಾತ್ರಿಗಳು ಇಲ್ಲಿಗೆ ಆಗಮಿಸ್ತಾರೆ. ಆದರೆ ನಾನು ಇಷ್ಟೊಂದು ಮೊತ್ತದ ಸಂಪತ್ತು ಇರಬಹುದೆಂದು ಊಹಿಸಿಯೂ ಇರಲಿಲ್ಲ ಎಂದು ಹೇಮಂತ್ ಹೇಳಿದ್ದಾರೆ.
ವೈಷ್ಣೋದೇವಿ ದೇವಾಲಯವು ಅತ್ಯಂತ ಪವಿತ್ರ ಹಿಂದೂ ದೇಗುಲಗಳಲ್ಲಿ ಒಂದಾಗಿದೆ. ಅನೇಕ ವರ್ಷಗಳಿಂದ ದೇವಾಲಯವನ್ನ ಪೂಜೆ ಮಾಡಿಕೊಂಡು ಬರ್ತಿದ್ದವರಿಂದ ಈ ದೇವಾಲಯವನ್ನ ಸ್ವಾಧೀನಪಡಿಸಿಕೊಳ್ಳಲಾಯ್ತು. 1986ರಲ್ಲಿ ಈ ದೇವಸ್ಥಾನಕ್ಕೆ ಮಂಡಳಿಯನ್ನ ರಚಿಸಲಾಯ್ತು. ಅಂದಿನಿಂದ ಇದೇ ಮಂಡಳಿ ದೇವಾಲಯದ ವ್ಯವಹಾರಗಳನ್ನ ನೋಡಿಕೊಳ್ತಿದೆ.
ಆದರೆ ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ದೇವಾಲಯದಲ್ಲಿ ಯಾತ್ರಾರ್ಥಿಗಳ ಸಂಖ್ಯೆ ತುಂಬಾನೇ ಕಡಿಮೆಯಾಗಿದೆ ಎಂಬ ಅಂಶವೂ ಆರ್ಟಿಐ ಅರ್ಜಿ ಬಹಿರಂಗಗೊಳಿಸಿದೆ. 2000ದಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. 2018 ಹಾಗೂ 19ರಲ್ಲಿ ಸುಮಾರು 80 ಲಕ್ಷಕ್ಕೂ ಅಧಿಕ ಮಂದಿ ಯಾತ್ರಾರ್ಥಿಗಳು ದೇಗುಲದ ದರ್ಶನ ಪಡೆದಿದ್ದಾರೆ. ಆದರೆ 2020ರಲ್ಲಿ ಕೇವಲ 17 ಲಕ್ಷ ಮಂದಿ ಮಾತ್ರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾ 78ರಷ್ಟು ಕುಸಿತ ಕಂಡಿದೆ.
2011 ಹಾಗೂ 2012ರಲ್ಲಿ ಈ ದೇವಾಲಯವು ಅತೀ ಹೆಚ್ಚು ಅಂದರೆ 1 ಕೋಟಿಗೂ ಅಧಿಕ ಮಂದಿ ಯಾತ್ರಾರ್ಥಿಗಳನ್ನ ಕಂಡಿದೆ. ಆದರೆ ಕಳೆದ ವರ್ಷ ಕೇವಲ 17 ಲಕ್ಷ ಮಂದಿ ಮಾತ್ರ ದೇಗುಲಕ್ಕೆ ಭೇಟಿ ನೀಡಿದ್ದು, ಇದರಿಂದ ಸ್ಥಳೀಯ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ ಎಂದು ಗೌನಿಯಾ ಹೇಳಿದ್ದಾರೆ.