ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ನೀಡಿರುವ ಶಿಫಾರಸ್ಸನ್ನ ಆಧರಿಸಿ ಕೇಂದ್ರ ಸರ್ಕಾರ ಕೋವಿಡ್ - 19 ಸೋಂಕಿತರು ಗುಣಮುಖರಾದ ಮೂರು ತಿಂಗಳ ಬಳಿಕ ಲಸಿಕೆ ಪಡೆಯಬಹುದು ಎಂದು ಬುಧವಾರ ಹೇಳಿದೆ.
ಕೊರೊನಾ ವೈರಸ್ ಸಾಂಕ್ರಾಮಿಕರು ಜಾಗತಿಕ ಮಟ್ಟದಲ್ಲಿ ಹಬ್ಬುತ್ತಿರುವ ಸಾಕ್ಷಿ ಹಾಗೂ ಅನುಭವಗಳನ್ನ ಆಧರಿಸಿ ಸರ್ಕಾರ ನಿಯೋಜಿತ ಸಮಿತಿಯು ಈ ಶಿಫಾರಸ್ಸನ್ನ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಕೊರೊನಾ ಲಸಿಕೆ ಸ್ವೀಕೃತಿ ವಿಚಾರದಲ್ಲಿ ಮಾಡಲಾದ ಈ ಬದಲಾವಣೆಯ ಬಗ್ಗೆ ತಿಳಿಸಿದ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಮಾಹಿತಿಯನ್ನ ರವಾನಿಸಿದೆ.
ಕೊರೊನಾದಿಂದ ಗುಣಮುಖರಾದ ಮೂರು ತಿಂಗಳ ಬಳಿಕ ಲಸಿಕೆಯನ್ನ ಪಡೆಯಬಹುದು. ಪ್ಲಾಸ್ಮಾ ಚಿಕಿತ್ಸೆ ಮೂಲಕ ಕೊರೊನಾದಿಂದ ಚೇತರಿಸಿಕೊಂಡವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನದಿಂದ ಮೂರು ತಿಂಗಳ ಬಳಿಕ ಲಸಿಕೆ ಪಡೆಯಬಹುದಾಗಿದೆ.
ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದ ಬಳಿಕ ಸೋಂಕಿಗೆ ಒಳಗಾದವರು ಕೋವಿಡ್ ಸೋಂಕಿನಿಂದ ಗುಣಮುಖರಾದವರೂ ಸಹ ಎರಡನೆ ಡೋಸ್ನ್ನು ಮೂರು ತಿಂಗಳ ಬಳಿಕವೇ ತೆಗೆದುಕೊಳ್ಳತಕ್ಕದ್ದು.
ಆಸ್ಪತ್ರೆ ಅಥವಾ ಐಸಿಯು ಅಗತ್ಯವಿರುವ ಯಾವುದೇ ಗಂಭೀರ ಕಾಯಿಲೆ ಹೊಂದಿರುವವರು 4-8 ವಾರಗಳ ಬಳಿಕ ಕೊರೊನಾ ಲಸಿಕೆಯನ್ನ ಪಡೆಯಬೇಕು .
ಕೋವಿಡ್ ಲಸಿಕೆ ಪಡೆದ ಬಳಿಕ ಹಾಗೂ ಕೋವಿಡ್ ಸೋಂಕಿಗೆ ಒಳಗಾಗಿ ಬಳಿಕ ಆರ್ಟಿ ಪಿಸಿಆರ್ ಟೆಸ್ಟ್ನಲ್ಲಿ ನೆಗೆಟಿವ್ ವರದಿ ಪಡೆದ ವ್ಯಕ್ತಿಯು 14 ದಿನಗಳ ಬಳಿಕ ರಕ್ತದಾನ ಮಾಡಬಹುದು ಎಂತಲೂ ಸರ್ಕಾರ ಹೇಳಿದೆ.
ಮಗುವಿಗೆ ಹಾಲುಣಿಸುತ್ತಿರುವ ಎಲ್ಲಾ ಮಹಿಳೆಯರು ಕೊರೊನಾ ಲಸಿಕೆಯನ್ನ ಪಡೆಯಬಹುದಾಗಿದೆ ಎಂದೂ ಕೇಂದ್ರ ಸಚಿವಾಲಯ ಹೇಳಿದೆ. ಆದರೆ ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಬಗ್ಗೆ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಇನ್ನೂ ಚರ್ಚೆಯನ್ನ ನಡೆಸುತ್ತಿದೆ.
ಈ ಎಲ್ಲಾ ನಿರ್ದೇಶನಗಳನ್ನ ಗಮನದಲ್ಲಿರಿಸಿ ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.