ದೇಶದಲ್ಲಿ ಇಂದಿನಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಈ ತಿಂಗಳು ಲಸಿಕೆಯನ್ನ ರಜಾ ದಿನಗಳಲ್ಲೂ ನೀಡಬೇಕು ಎಂದು ಕೇಂದ್ರ ಸರ್ಕಾರ ಹೊಸ ಪ್ರಕಟಣೆ ಹೊರಡಿಸಿದೆ. ಈ ಹೊಸ ನಿಯಮವು ಸರ್ಕಾರಿ ಹಾಗೂ ಖಾಸಗಿ ಲಸಿಕೆ ಕೇಂದ್ರಗಳಿಗೆ ಅನ್ವಯಿಸಲಿದೆ.
ಬುಧವಾರ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಜೊತೆ ಚರ್ಚೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ಈ ಕ್ರಮವನ್ನ ಕೈಗೊಂಡಿದೆ. ಲಸಿಕೆ ಅಭಿಯಾನದ ವೇಗವನ್ನ ಹೆಚ್ಚಿಸುವ ಸಲುವಾಗಿ ಈ ನಿರ್ಧಾರವನ್ನ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ದೇಶದಲ್ಲಿ ಕೊರೊನಾದಿಂದ ಹೆಚ್ಚು ಅಪಾಯ ಹೊಂದಿರುವ ಹೆಚ್ಚಿನ ವಯಸ್ಸಿನ ಜನರಿಗೆ ಈ ಲಸಿಕೆಯನ್ನ ನೀಡಲಾಗ್ತಿದೆ. ಇಂದಿನಿಂದ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗ್ತಿದೆ. ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ನೀಡಿದ ಸಲಹೆಯನ್ನ ಆಧರಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ.