ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡವರಿಗೆ ಯಾವಾಗ ಕೊರೊನಾ ಲಸಿಕೆ ನೀಡಬೇಕೆಂಬ ಗೊಂದಲ ಸಾಮಾನ್ಯವಾಗಿ ಎಲ್ಲರಿಗೂ ಇದೆ. ಒಂಬತ್ತು ತಿಂಗಳ ನಂತರ ಕೋವಿಡ್ ಲಸಿಕೆ ನೀಡಬೇಕೆಂದು ಸರ್ಕಾರಿ ಸಮಿತಿ ಶಿಫಾರಸು ಮಾಡಿದೆ. ವ್ಯಾಕ್ಸಿನೇಷನ್ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಈ ಸಲಹೆಯನ್ನು ನೀಡಿದೆ. ಈ ಮೊದಲು, ಎನ್‌ಟಿಎಜಿಐ ಆರು ತಿಂಗಳ ನಂತ್ರ ಲಸಿಕೆ ನೀಡಬಹುದು ಎಂದಿತ್ತು. ಈಗ ಸಮಿತಿ ಒಂಬತ್ತು ತಿಂಗಳ ದೀರ್ಘ ಅಂತರ ನೀಡಬೇಕೆಂದು ಸರ್ಕಾರಕ್ಕೆ ಸೂಚಿಸಿದೆ.
ಕೋವಿಶೀಲ್ಡ್ ಎರಡು ಡೋಸ್ ನಡುವಿನ ವ್ಯತ್ಯಾಸವನ್ನು 12–16 ವಾರಗಳಿಗೆ ಹೆಚ್ಚಿಸಲು ಸಲಹಾ ಸಮಿತಿ ಶಿಫಾರಸು ಮಾಡಿದ ನಂತ್ರ ಈ ಸಲಹೆ ನೀಡಲಾಗಿದೆ. ಕೋವಿಶೀಲ್ಡ್ ನ ಎರಡು ಡೋಸ್ ಗಳ ನಡುವೆ ನಾಲ್ಕರಿಂದ ಎಂಟು ವಾರಗಳ ಅಂತರವಿರಲಿದೆ. ತಜ್ಞರ ಸಮಿತಿಯು ಸಮಯದ ಪರಿಶೀಲನೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದತ್ತಾಂಶಗಳನ್ನು ನೋಡಿದೆ ಎನ್ನಲಾಗಿದೆ.
ಸೋಂಕಿನಿಂದ ಚೇತರಿಕೆ ಹಾಗೂ ಮೊದಲ ಡೋಸ್ ಮಧ್ಯೆ ದೊಡ್ಡ ಅಂತರವಿದ್ದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಲಸಿಕೆ ಪಡೆಯಲು ಅರ್ಹರೆಂದು ಪರಿಗಣಿಸಬೇಕೆಂದು ಸಮಿತಿ ಸೂಚಿಸಿದೆ. ಈ ವಿಷಯದಲ್ಲಿ ಆರೋಗ್ಯ ಸಚಿವಾಲಯವು ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ.