ಕಳೆದ ಕೆಲ ತಿಂಗಳುಗಳಿಂದ ಫೋನ್ ಕಾಲ್ ಮಾಡುವಾಗಲೆಲ್ಲಾ ಕೊರೋನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡುತ್ತಿರುವ ಅಮಿತಾಭ್ ಬಚ್ಚನ್ ದನಿ ಕೇಳುತ್ತಿದ್ದ ದೇಶವಾಸಿಗಳಿಗೆ ಇದೀಗ ಈ ಕಾಲರ್ ಟ್ಯೂನ್‌ನಿಂದ ಮುಕ್ತಿ ಸಿಕ್ಕಿದೆ.
ಇಂದಿನಿಂದ ಕೋವಿಡ್-19 ನಿರೋಧಕ ಲಸಿಕೆ ಕಾರ್ಯಕ್ರಮ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚುಚ್ಚುಮದ್ದಿನ ಬಗ್ಗೆ ಅರಿವು ಮೂಡಿಸುವ ಹೊಸ ಕಾಲರ್ ಟ್ಯೂನ್ ಅನ್ನು ಆರಂಭಿಸಲಾಗಿದೆ. ಇದು ಮಹಿಳೆಯೊಬ್ಬರ ದನಿಯಲ್ಲಿದೆ.
“ನಮಸ್ಕಾರ, ಹೊಸ ವರ್ಷಕ್ಕೆ ಕೋವಿಡ್ ಲಸಿಕೆ ರೂಪದಲ್ಲಿ ಹೊಸ ಆಶಾಕಿರಣ ಬಂದಿದೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಲಸಿಕೆ ಸುರಕ್ಷಿತವಾಗಿದೆ. ಕೋವಿಡ್ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಇದು ಒದಗಿಸುತ್ತದೆ” ಎಂದು ಈ ಕಾಲರ್ ಟ್ಯೂನ್ ಹೇಳುತ್ತದೆ.
ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಬಗ್ಗೆ ಇರುವ ಅಸ್ಪಷ್ಟತೆಗಳ ಬಗ್ಗೆ ಇದ್ದ ಆತಂಕಗಳನ್ನು ದೂರ ಮಾಡುವ ಈ ಕಾಲರ್ ಟ್ಯೂನ್ ಜನವರಿ 15ರಿಂದ ಚಾಲ್ತಿಯಲ್ಲಿದೆ.