ಲಖನೌ: ಮರು ಬಳಕೆಗೆ ಬಾರದ ಪ್ಲಾಸ್ಟಿಕ್ ನಿಂದ 1500 ಕಿಮೀ ರಸ್ತೆ ನಿರ್ಮಾಣ ಮಾಡಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಯೋಜಿಸಿದೆ. ಯುಪಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)ಈ ನಿಟ್ಟಿನಲ್ಲಿ ಯೋಜಿಸಿದ್ದು, ಸುಮಾರು 2 ಸಾವಿರ ಟನ್ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬಳಕೆ, ಅದರ ಖರ್ಚಿನ ಬಗ್ಗೆ ಈಗಾಗಲೇ ಇಲಾಖೆಯಲ್ಲಿ ದರ ನಿಗದಿ ಮಾಡಲಾಗಿದೆ. ಪ್ರಾರಂಭದಲ್ಲಿ ಪ್ರಾಯೋಗಿಕವಾಗಿ 12 ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅದರ ಪರಿಣಾಮ ನೋಡಿ 1500 ಕಿಮೀ ಯೋಜನೆ ರೂಪಿಸಲಾಯಿತು ಎಂದು ಪಿಡಬ್ಲ್ಯುಡಿ ಪ್ರಿನ್ಸಿಪಲ್ ಸೆಕ್ರೆಟರಿ ನಿತಿನ್ ರಮೇಶ ಗೋಕರ್ಣ ತಿಳಿಸಿದ್ದಾರೆ.
ಈಗಾಗಲೇ ಪ್ಲಾಸ್ಟಿಕ್ ಬಳಸಿ 94 ಕಿಮೀ ಉದ್ದದ 75 ರಸ್ತೆ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. 63 ಟನ್ ಪ್ಲಾಸ್ಟಿಕ್ ಕಸ ಬಳಸಿ 43 ಕಿಮೀಯ 32 ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಇದೇನು ಹೊಸ ಯೋಜನೆಯಲ್ಲ. ಭಾರತ ಸರ್ಕಾರ 2015 ರಲ್ಲೇ ಈ ಬಗ್ಗೆ ಯೋಜನೆ ಸಿದ್ಧಪಡಿಸಿದೆ. ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಇಂಥ ರಸ್ತೆಗಳು ಸಿದ್ಧವಾಗಿವೆ.