ಬಳಸಿದ ಕಾಂಡೋಮ್ನ್ನು ಹಾವಿನ ಮುಖಕ್ಕೆ ಕಟ್ಟಿ ವಿಕೃತಿ ಮೆರೆದ ಘಟನೆ ಮುಂಬೈನಲ್ಲಿ ನಡೆದಿದೆ. ಕಾಂಡೋಮ್ನ್ನು ಮುಖಕ್ಕೆ ಕಟ್ಟಿದ್ದರಿಂದ ಹಾವು ಅಸ್ವಸ್ಥಗೊಂಡಿದೆ ಎನ್ನಲಾಗಿದೆ.
ಜನವರಿ 2ನೇ ತಾರೀಖಿನಂದು ಮುಂಬೈನ ಖಾಂಡಿವಲಿ ಪೂರ್ವ ಪ್ರದೇಶದ ಗ್ರೀನ್ ಮೆಡೋಸ್ ಹೌಸಿಂಗ್ ಸೊಸೈಟಿ ಬಳಿ ಈ ಅಮಾನವೀಯ ಘಟನೆ ನಡೆದಿದೆ. ಬೆಳಗ್ಗೆ 8.30ರ ಸುಮಾರಿಗೆ ಈ ಹಾವನ್ನ ಗಮನಿಸಿದ ವ್ಯಕ್ತಿಯೊಬ್ಬರು ಹಾವು ರಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳೀಯ ನಿವಾಸಿ ವೈಶಾಲಿ ತನ್ಹಾ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ಮಿತಾ ಮಾಲ್ವಂಕರ್, ಹಾವಿನ ಮುಖಕ್ಕೆ ಪ್ಲಾಸ್ಟಿಕ್ ಚೀಲ ಕಟ್ಟಿರೋದನ್ನ ಗಮನಿಸಿದರು. ಹಾವಿನ ಬಳಿಗೆ ಹೋಗುತ್ತಿದ್ದಂತೆಯೇ ಅದು ಬಳಸಿದ ಕಾಂಡೋಮ್ ಎಂಬ ವಿಚಾರ ಬೆಳಕಿಗೆ ಬಂದಿದೆ.
ಎರಡೂವರೆ ಮೀಟರ್ ಉದ್ದದ ಹಾವಿನ ಮುಖಕ್ಕೆ ಕಟ್ಟಲಾದ ಕಾಂಡೋಮ್ ತೆಗೆದ ಬಳಿಕ ಅದನ್ನ ಮುಂಬೈನ ಬೊರಿವಿಲಿಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯಲಾಗಿದೆ. ಪಶು ವೈದ್ಯಾಧಿಕಾರಿಗಳು ಹಾವಿನ ಆರೋಗ್ಯ ತಪಾಸಣೆ ನಡೆಸಿದ್ದು ಹಾವು ಒತ್ತಡದಿಂದ ಬಳಲಿದೆ ಎಂದು ಹೇಳಿದ್ದಾರೆ. ಹಾವಿಗೆ ಸೂಕ್ತ ಚಿಕಿತ್ಸೆ ನೀಡಿ ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ. ಅಲ್ಲದೇ ಈ ಕೃತ್ಯ ಎಸಗಿದವರ ವಿರುದ್ಧ ಪ್ರಕರಣ ದಾಖಲಾಗಿದೆ.