ಆಸ್ತಿ ವಿಚಾರವಾಗಿ ಹೆತ್ತವರು ಹಾಗೂ ಮಕ್ಕಳ ನಡುವೆ ವೈಮನಸ್ಯ ಮೂಡುವುದು ಹೊಸ ವಿಚಾರವೇನಲ್ಲ. ತಂದೆಯೊಬ್ಬರು ತಮ್ಮ ಮಗನಿಂದ ತೀರಾ ಬೇಸತ್ತು ತಮ್ಮ ಆಸ್ತಿಯ ಭಾಗವೊಂದನ್ನು ತಮ್ಮ ಸಾಕು ನಾಯಿಗೆ ಬರೆದ ಘಟನೆ ಮಧ್ಯ ಪ್ರದೇಶದಲ್ಲಿ ಜರುಗಿದೆ.
ವೃತ್ತಿಯಲ್ಲಿ ರೈತರಾದ ಓಂ ನಾರಾಯಣ್ ವರ್ಮಾ, ತಮ್ಮ ಆಸ್ತಿಯ ವಿಲ್‌ನಲ್ಲಿ ಸಾಕು ನಾಯಿ ಜಾಕಿಯೂ ಸಹ ಪಾಲುದಾರ ಎಂದು ಬರೆದಿದ್ದು, ಅದಕ್ಕೆ ಎರಡು ಎಕರೆ ಜಮೀನನ್ನು ಕಾಣಿಸಿದ್ದಾರೆ.
ಮಧ್ಯ ಪ್ರದೇಶದ ಚಿಂದ್ವಾರಾ ಜಿಲ್ಲೆಯ ಬಾರಿಬಾಡಾ ಗ್ರಾಮದವರಾದ ಓಂ ನಾರಾಯಣ್ ಈ ಬಗ್ಗೆ ಮಾತನಾಡಿ, “ನನ್ನ ಮಡದಿ ಚಂಪಾ ಹಾಗೂ ಸಾಕು ನಾಯಿ ಜಾಕಿ ನನ್ನ ಸೇವೆ ಮಾಡುತ್ತಿದ್ದು, ನಾನು ಈಗ ಆರೋಗ್ಯವಾಗಿದ್ದೇನೆ. ಇಬ್ಬರೂ ಸಹ ನನ್ನ ಪ್ರೀತಿಪಾತ್ರರಾಗಿದ್ದಾರೆ” ಎನ್ನುತ್ತಾರೆ.
11 ತಿಂಗಳ ತಮ್ಮ ಸಾಕು ನಾಯಿಯನ್ನು ತಮ್ಮ ಮರಣಾನಂತರ ಯಾರು ನೋಡಿಕೊಳ್ಳುತ್ತಾರೋ ಅವರಿಗೆ ಅದರ ಪಾಲಿಗೆ ಬರೆದಿರುವ ಎರಡು ಎಕರೆ ಮೇಲೆ ಹಕ್ಕು ಇರಲಿದೆ ಎಂದು ವರ್ಮಾ ಬರೆದಿದ್ದಾರೆ.
ಆದರೆ ಕಹಾನಿಗೆ ಇಲ್ಲೊಂದು ಟ್ವಿಸ್ಟ್ ಇದೆ. ಮಗನ ಮೇಲೆ ಕೋಪಗೊಂಡು ಹೀಗೆ ವಿಲ್ ಬರೆದಿದ್ದ ವರ್ಮಾರನ್ನು ಮನವೊಲಿಸಿದ ಆತನ ಗ್ರಾಮದ ಸರ್ಪಂಚ್, ಮತ್ತೊಮ್ಮೆ ವಿಲ್ ಅನ್ನು ಬರೆಯುವಂತೆ ಮಾಡಿದ್ದಾರೆ.