
ಬಿಜ್ನೋರ್: ಅಪಘಾತದ ನಾಟಕವಾಡಿ ಸಂಬಂಧಿಕರ ಮನೆಯಲ್ಲಿದ್ದ ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಶುಕ್ರವಾರದಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಸುದೀರ್ಘ ಕಾರ್ಯಾಚರಣೆಯ ನಂತರ ಪೊಲೀಸರು ಹರಿದ್ವಾರದಲ್ಲಿ ಪತ್ತೆ ಮಾಡಿದ್ದಾರೆ.
35 ವರ್ಷದ ಮಹಿಳೆಯನ್ನು ಸಂತೋಷ್ ದೇವಿ ಎಂದು ಗುರುತಿಸಲಾಗಿದೆ. ಭೋನವಾಲಾ ಗ್ರಾಮದ ಹೊರವಲಯದಲ್ಲಿದ್ದ ಜಮೀನಿಗೆ ಮೇವು ತರಲು ತೆರಳಿದ್ದ ಸಂತೋಷ್ ದೇವಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಆಕೆ ನಾಪತ್ತೆಯಾದ ನಂತರ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು.
ಆಕೆ ನಾಪತ್ತೆಯಾದ ಸ್ಥಳವನ್ನು ಸುತ್ತುವರೆದು ಸಮೀಪದ ಕಾಡಿನನಲ್ಲಿಯೂ ಹುಡುಕಾಟ ನಡೆಸಲಾಗಿತ್ತು. ಡ್ರೋನ್ ಕೂಡ ಬಳಸಿ ಹುಡುಕಾಟ ನಡೆಸಲಾಗಿದ್ದು ಹೀಗೆ ವಿವಿಧ ಆಯಾಮಗಳಲ್ಲಿ ಹುಡುಕಾಟ ನಡೆಸಿದಾಗ ಆಕೆ ನಾಪತ್ತೆಯಾಗುವ ಮೊದಲು ಹರಿದ್ವಾರದಲ್ಲಿನ ಸಂಬಂಧಿಗೆ ಕರೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಅಲ್ಲದೆ, ನಾಪತ್ತೆಯಾಗುವ ಸಂದರ್ಭದಲ್ಲಿ ಅದೇ ಪ್ರದೇಶದಲ್ಲಿ ಆ ಮೊಬೈಲ್ ಸಂಖ್ಯೆ ಸಕ್ರಿಯವಾಗಿರುವುದು ಗೊತ್ತಾಗಿದೆ. ಸಂತೋಷ್ ದೇವಿ ಸೋದರಮಾವ ದೇವೇಂದ್ರಕುಮಾರ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು, ಇಬ್ಬರು ನಾಟಕವಾಡಿ ಹೊಲಕ್ಕೆ ಹೋದಾಗ ಅಪಹರಣವಾದಂತೆ ಬಿಂಬಿಸಿದ್ದಾರೆ.
ಹೊಲಕ್ಕೆ ಬಂದು ಸಂತೋಷ್ ದೇವಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದ ದೇವೇಂದ್ರ ಕುಮಾರ್ ಸಂಬಂಧಿಕರ ಮನೆಯಲ್ಲಿ ಆಕೆಯನ್ನು ಇಳಿಸಿ ಮತ್ತೆ ಭೋನವಾಲಾಕ್ಕೆ ಬಂದು ಅನುಮಾನ ಬರದಂತೆ ನಡೆದುಕೊಂಡಿದ್ದ. ಪೊಲೀಸರ ತನಿಖೆಯಲ್ಲಿ ಇದೆಲ್ಲವೂ ಗೊತ್ತಾಗಿದೆ. ಐಪಿಸಿ ಸೆಕ್ಷನ್ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.